ಬೆಳಗಾವಿ: ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಿ ಪ್ರಯಾಣಿಕರಿಗೆ ಐಷಾರಾಮಿ ಮತ್ತು ಪರಿಸರ ಸ್ನೇಹಿ ಪ್ರಯಾಣದ ಸವಿಯನ್ನು ನೀಡಲು ಶೀಘ್ರದಲ್ಲಿಯೇ 50 ನೂತನ ವಿದ್ಯುತಚಾಲಿತ ಬಸ್ಸುಗಳು ಬೆಳಗಾವಿ ನಗರ ಹಾಗೂ ಜಿಲ್ಲೆಗೆ ಆಗಮಿಸಲಿವೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಒಟ್ಟು 350 ಬಸ್ಸುಗಳು ಆಗಮಿಸಲಿದ್ದು, ಅದರಲ್ಲಿ ಬೆಳಗಾವಿ ಜಿಲ್ಲೆಗೆ ಒಟ್ಟು 100 ಬಸ್ಸುಗಳು ಆಗಮಿಸಿದರೆ, ಅದರಲ್ಲಿನ 50 ಕೇವಲ ಬೆಳಗಾವಿಗೆ ಬರಲಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯ ಪರಿಣಾಮವಾಗಿ ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ವಿದ್ಯುತಚಾಲಿತ ಬಸ್ ಪೂರೈಸುವ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು (GCC) ಮಾದರಿಯ ಅಡಿಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಅಂತಿಮ ಹಂತದಲ್ಲಿದೆ.
ಡಿಸೆಲ್ ಬಸಗಳು ಹೊರಸೂಸುವ ವಾಯುಮಾಲಿನ್ಯದಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನಗರ ಪ್ರದೇಶದಲ್ಲಿ ಇದನ್ನು ತಗ್ಗಿಸಲು ಮತ್ತು ಗಾಳಿಯ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ವಿದ್ಯುತಚಾಲಿತ ಬಸ್‌ಗಳಿಗೆ ಬದಲಾವಣೆಗೊಳ್ಳಲಾಗುತ್ತಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಡೀಸೆಲ್ ಬಸ್‌ಗಳಿಗೆ ಪ್ರತಿ ಕಿ.ಮೀ.ಗೆ 48 ರೂ.ಗಳ ವೆಚ್ಚ ಮಾಡುತ್ತಿದೆ. ನೂತನ ಇ-ಬಸ್ ಸೇವೆಯು ಈಗಿರುವದಕ್ಕಿಂತ ಕಡಿಮೆ ವೆಚ್ಚದಲ್ಲಿ ಕಾರ್ಯನಿರ್ವಹಿಸಲಿವೆ. ಇದರಿಂದ ನಿಗಮವು ಆರ್ಥಿಕವಾಗಿ ಚೇತರಿಸಿಕೊಳ್ಳಲು ಅನುಕೂಲವಾಗುವದಲ್ಲದೇ ಪ್ರಯಾಣಿಕರ ಸೇವೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ನೂತನ ವಿದ್ಯುತಚಾಲಿತ ಬಸಗಳು ಇಂಟರಸಿಟಿ ಮಾರ್ಗಗಳಲ್ಲಿಸಂಚರಿಸಲಿದ್ದು, 150 ಬಸ್‌ಗಳನ್ನು ಹುಬ್ಬಳ್ಳಿ-ಧಾರವಾಡ, 50 ಬೆಳಗಾವಿಗೆ ಹಾಗೂ ಹುಬ್ಬಳ್ಳಿ, ಬೆಳಗಾವಿಯಿಂದ ನೆರೆಯ ಪಟ್ಟಣಗಳಿಗೆ ಸಂಪರ್ಕಿಸಲು 200 ಬಸ್‌ಗಳನ್ನು ನಿಯೋಜಿಸಲಾಗುತ್ತದೆ.
ಜಿಸಿಸಿ ಅಡಿಯಲ್ಲಿ, ಸೇವಾ ಪೂರೈಕೆದಾರರು ನಾನ್-ಎಸಿ ಇ-ಬಸ್‌ಗಳನ್ನು ಪೂರೈಸುವ, ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಅಲ್ಲದೇ ನಿಗಮವು ಗೊತ್ತುಪಡಿಸಿದ ಸ್ಥಳಗಳಲ್ಲಿ ಚಾರ್ಜಿಂಗ್ ಸೌಲಭ್ಯಗಳನ್ನು ಸ್ಥಾಪಿಸಬೇಕಾಗುತ್ತದೆ, ಜೊತೆಗೆ ಚಾಲಕರಿಗೆ ವ್ಯವಸ್ಥೆ ಮಾಡಬೇಕಾಗುತ್ತದೆ. ಕಾರ್ಯಾಚರಣೆಯ ಪ್ರತಿ ಕಿಲೋಮೀಟರ್‌ಗೆ ನಿಗದಿತ ಬೆಲೆಯನ್ನು ಪಾವತಿಸುತ್ತದೆ. ಆಯ್ಕೆಮಾಡಿದ ಸೇವಾ ಪೂರೈಕೆದಾರರು ಒಪ್ಪಂದದ ಆರು ತಿಂಗಳೊಳಗೆ ಅಗತ್ಯ ಚಾರ್ಜಿಂಗ್ ಮೂಲಸೌಕರ್ಯವನ್ನು ಹೊಂದಿಸಬೇಕು, ಚಾರ್ಜಿಂಗ್ ಸ್ಟೇಷನ್‌ಗಳಿಗಾಗಿ ಮೂರು ಸ್ಥಳಗಳನ್ನು ಗುರುತಿಸಬೇಕು. ಸಾರ್ವಜನಿಕ ಸಾರಿಗೆ ಜಾಲವನ್ನು ಆಧುನೀಕರಿಸುವ ಮತ್ತು ಹಸಿರೀಕರಣಗೊಳಿಸುವ ಉದ್ದೇಶದಿಂದ ಇ-ಬಸ್ ಒಪ್ಪಂದವು ಹತ್ತು ವರ್ಷಗಳವರೆಗೆ ಇರಲಿದೆ.