ಬೆಳಗಾವಿ: ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನಕ್ಕೆ ಉತ್ತರ ಕೊಡಲು ಭಾರತೀಯ ಸೇನೆ ಸನ್ನದ್ಧವಾಗಿದೆ. ರಜೆ ಮೇಲೆ ಬಂದಿದ್ದ ಯೋಧರಿಗೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳಿಂದ ಬುಲಾವ್ ಬಂದಿದ್ದು, ಎರಡು ವಾರದ ಹಿಂದಷ್ಟೇ ಮದುವೆ, ನಿಶ್ಚಿತಾರ್ಥ ಆಗಿದ್ದ ಯೋಧರು ಕರ್ತವ್ಯಕ್ಕೆ ಹಾಜರಾಗಲು ಸಜ್ಜಾಗಿದ್ದಾರೆ.
ಹೌದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಅಸುಂಡಿ ಗ್ರಾಮದ ಯೋಧರು ತಮ್ಮ ರಜೆ ಮೊಟಕುಗೊಳಿಸಿ ಪತ್ನಿ, ತಂದೆ-ತಾಯಿ ಹಾಗೂ ಕುಟುಂಬಸ್ಥರನ್ನು ಬಿಟ್ಟು ಸೇನೆಗೆ ಹೋಗಲು ನಾಲ್ವರು ಯೋಧರು ಸಜ್ಜಾಗಿದ್ದಾರೆ. ಏಪ್ರೀಲ್‌ 21ರಂದು ಉಮೇಶ ದ್ಯಾಮನಾಯ್ಕರ, ಸಂಗಮೇಶ ದ್ಯಾಮನಾಯ್ಕರ ಸಹೋದರರ ವಿವಾಹವಾಗಿದ್ದು, ಸೇನೆಯಿಂದ ಬುಲಾವ್ ಬಂದ ಹಿನ್ನಲೆಯಲ್ಲಿ ನಿನ್ನೆಯೇ ಉಮೇಶ ಜಮ್ಮುವಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅದೇ ರೀತಿ ಸಂಗಮೇಶ ಅವರು ಮೇ.14ರಂದು ಜಮ್ಮುವಿನತ್ತ ಪ್ರಯಾಣ ಬೆಳೆಸಲಿದ್ದಾರೆ.
ಉಮೇಶ ಸ್ಪೇಷಲ್ ಫೋರ್ಸ್ ಕಮಾಂಡೋದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಸಿಗ್ನಲ್ ಕಮ್ಯನಿಕೇಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಇದೇ ಗ್ರಾಮದ ಯೋಧ ಯಲ್ಲಪ್ಪ ಬಸಪ್ಪ ಚಿಕ್ಕನ್ನವರ ಎಂಗೇಜ್ಮೆಂಟ್ ಏಪ್ರೀಲ್ 28ಕ್ಕೆ ಆಗಿದ್ದು, ಸೇನೆಗೆ ಬರಲು ಸಿದ್ಧರಾಗುವಂತೆ ಕರೆ ಬಂದಿದೆ. ಇನ್ನು ಮಾರ್ಚ್ 27ಕ್ಕೆ‌ ಮದುವೆ ಆಗಿರುವ ಅಸ್ಸಾಂನಲ್ಲಿ ಇಎಂಇ ಟೆಕ್ನಿಷಿಯನ್ ಆಗಿರುವ ಯೋಧ ಶಿವರಾಜ ಅಶೋಕ‌ ಚಿಕ್ಕನ್ನವರ ರಜೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರು ಕೂಡ ಇಂದು ಸಾಯಂಕಾಲ ಅಸ್ಸಾಂನತ್ತ ತೆರಳುತ್ತಿದ್ದಾರೆ. ಅವರ ಕುಟುಂಬಸ್ಥರಲ್ಲಿ ನೋವಿದ್ದರೂ ಕೂಡ ಅದನ್ನು ತೋರಿಸಿಕೊಳ್ಳದೇ ಖುಷಿಯಿಂದ ಕಳಿಸಿಕೊಡುತ್ತಿದ್ದಾರೆ.
ಸಂದರ್ಶನದಲ್ಲಿ ನಮ್ಮನ್ನು ನಂಬಿ ದೇಶದ ಲಕ್ಷಾಂತರ ಕುಟುಂಬಗಳು ವಿಶ್ರಾಂತಿಯಿಂದ ನಿದ್ದೆ ಮಾಡುತ್ತಿವೆ. ಅದು ಹುಸಿ ಆಗಬಾರದು. ಅಲ್ಲದೇ ವಸುದೈವ ಕುಟುಂಬಕಂ ಎಂಬ ಮಾತಿನಂತೆ ಇಡೀ ದೇಶವೇ ನಮ್ಮ ಕುಟುಂಬ ಎಂಬ ಭಾವನೆ ನಮ್ಮಲ್ಲಿದೆ. ಅ ಖುಷಿಯಿಂದ ಹೋಗುತ್ತಿದ್ದೇನೆ.ತಮ್ಮ ಉಮೇಶ ನಿನ್ನೆ ಕರ್ತವ್ಯಕ್ಕೆ ಹಾಜರಾಗಿದ್ದಾನೆ.
ಸಂಗಮೇಶ ಪತ್ನಿ ಭಯ ಅಂತೂ ಇದೆ, ಆದರೂ ಧೈರ್ಯ ಮತ್ತು ಹೆಮ್ಮೆಯಿಂದ ನಮ್ಮ ಯಜಮಾನರನ್ನು ಕಳಿಸಿ ಕೊಡುತ್ತಿದ್ದೇವೆ ಎಂದರೆ, ಸಂಗಮೇಶ ಮತ್ತು ಉಮೇಶ ಅವರ ತಾಯಿ ಯಲ್ಲವ್ವ ಮತ್ತು ತಂದೆ ಮುದುಕಪ್ಪ ಮಾತನಾಡಿ, ಆತ್ಮ ಸಂತೋಷದಿಂದ ಮಗನನ್ನು ಸೇನೆಗೆ ಕಳಿಸುತ್ತಿದ್ದೇನೆ. ನನ್ನ ಮಕ್ಕಳು ಅಷ್ಟೇ ಅಲ್ಲ ಎಲ್ಲಾ ಸೈನಿಕರು ಕಂಕಣ ತೊಟ್ಟು ಹೋಗುತ್ತಿದ್ದಾರೆ. ವಿಜಯಶಾಲಿ ಆಗಿ ಬರಲಿ ಎಂದು ಆಶೀರ್ವದಿಸಿದರು.
ಯಾವಾಗ ಬೇಕಾದರೂ ಬರಬೇಕಾಗುತ್ತದೆ. ಸೇನೆಗೆ ಬರಲು ಸಿದ್ಧವಾಗುವಂತೆ ಕರೆ ಬಂದಿದೆ. ನನ್ನ ಬಾವಿ ಪತ್ನಿ ಕೂಡ ಖುಷಿಯಿಂದ ಕಳಿಸಿ ಕೊಡುತ್ತಿದ್ದಾರೆ ಎಂಬುದು ಈಗಷ್ಟೇ ನಿಶ್ಚಿತಾರ್ಥ ಮುಗಿಸಿಕೊಂಡಿರುವ ಯೋಧ ಯಲ್ಲಪ್ಪ ಚಿಕ್ಕನ್ನವರ ಅಭಿಪ್ರಾಯ.
ಸೇನೆ ಸೇರಲು ನನ್ನ ಮಗ ಬಹಳಷ್ಟು ಕಷ್ಟ ಪಟ್ಟಿದ್ದಾನೆ. ಒಳ್ಳೆಯ ರೀತಿ ಹೋಗಿ, ದೇಶವನ್ನು ಸುರಕ್ಷಿತವಾಗಿ ಕಾಪಾಡಿ ಬರಲಿ ಎಂದು ಯೋಧ ಯಲ್ಲಪ್ಪ ತಾಯಿ ಯಲ್ಲವ್ವ ಅವರು ಆಶಿಸಿದರು.
ನನ್ನ ಮಗ ಒಳ್ಳೆಯ ಯೋಧ. ಮಗನನ್ನು ಕಳಿಸಲು ಒಂದು ಕಡೆ ದುಃಖ ಆಗುತ್ತದೆ. ಆದರೆ, ದೇಶ ರಕ್ಷಣೆ ಸಲುವಾಗಿ
ಯುದ್ಧಕ್ಕೆ ಕಳಿಸಲು ನಾವು ಸಿದ್ಧರಿದ್ದೇವೆ. ಎಲ್ಲಾ ಯೋಧರಿಗೂ ಒಳ್ಳೆಯದಾಗಲಿ ಎನ್ನುತ್ತಾರೆ ಯೋಧ ಶಿವರಾಜ ಚಿಕ್ಕನ್ನವರ ತಾಯಿ ನಿರ್ಮಲಾ.
ಯೋಧ ಶಿವರಾಜ ಪತ್ನಿ ವಿದ್ಯಾ ಮಾತನಾಡಿ, ಪಾಕಿಸ್ತಾನಿ ಉಗ್ರರು ನಮ್ಮ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿ ಹಾಕಿದ್ದಾರೆ. ಮದುವೆಯಾಗಿ ಆರು ದಿನ ಆಗಿತ್ತಷ್ಟೇ, ಪತ್ನಿ ಮುಂದೆಯೇ ಪತಿಯನ್ನು ಕೊಂದು ಹಾಕಿದರು. ಅದೇಷ್ಟೋ ಮಹಿಳೆಯರು, ಕುಟುಂಬಸ್ಥರು ದುಃಖದಲ್ಲಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಆ ನಿಟ್ಟಿನಲ್ಲಿ ಸೇನೆಗೆ ನನ್ನ ಗಂಡನ ಅವಶ್ಯಕತೆ ಇದೆ. ಹಾಗಾಗಿ, ನನ್ನ ಯಜಮಾನರನ್ನು ಕಳಿಸಿ ಕೊಡುತ್ತಿದ್ದೇವೆ. ವಿಜಯಶಾಲಿ ಆಗಿ ಬರಲಿ ಎಂದು ಹಾರೈಸಿದರು.
ಒಂದು ವಾರದ ಹಿಂದೆ ಕರೆ ಬಂದಿತ್ತು. ಹಾಗಾಗಿ, ಇಂದು 8 ಗಂಟೆಗೆ ವಿಮಾನದ ಮೂಲದ ಅಸ್ಸಾಂಗೆ ಹೋಗುತ್ತಿದ್ದೇನೆ. ದೇಶದ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ನಿಮ್ಮ ರಕ್ಷಣೆಗೆ ನಾವು ಯೋಧರಿದ್ದೇವೆ ಎಂದು ಯೋಧ ಶಿವರಾಜ ಧೈರ್ಯ ತುಂಬಿದರು.