ಬೆಳಗಾವಿ : ರಾಜ್ಯ ಸರಕಾರವು ಜಾತಿ ಗಣತಿ ವರದಿ ಬಿಡುಗಡೆಗೊಳಿಸಿ ಲಿಂಗಾಯತರು ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಎತ್ತಿ ತೋರಿಸಿದೆ. ಆದರೆ ಅದೇ ಲಿಂಗಾಯತರು ರಾಜ್ಯದ ಹಾಗೂ ದೇಶದ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅಷ್ಟೇ ಅಲ್ಲ ನಾವು ಪ್ರಬಲರು ಎಂದು ಹಿಡಿತ ಸಾದಿಸುವಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ. ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರಗಳ ಇತಿಹಾಸವನ್ನು ಕೆದಕಿದಾಗ ಅತೀ ಹೆಚ್ಚು ಬಾರಿ ಗೆಲವು ಸಾಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಸಾಕಷ್ಟು ಪ್ರಖರತೆಯನನು ಪಡೆಯುತ್ತಿದ್ದು, ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಮತ್ತೆ ಲಿಂಗಾಯತ ಅಭ್ಯರ್ಥಿಗಳ ವರ್ಚಸ್ಸು ಪ್ರಧಾನವಾಗಿ ಎದ್ದುಕಾಣುತ್ತಿದೆ.  ಇದಕ್ಕೆ ಸಾಕ್ಷಿ ಎಂಬಂತೆ ಇದುವರೆಗೆ ನಡೆದ ಎಲ್ಲ ಲೋಕಸಭಾ ಚುನಾವಣೆಯ ಅಂಕಿ ಅಂಶಗಳನ್ನು ಗಮನಿಸಿದಾಗ ಲಿಂಗಾಯತರ ವರ್ಚಸ್ಸು ಹಾಗೂ ಪ್ರಾಬಲ್ಯ ಇರುವದನ್ನು ಗಮನಿಸಬಹುದು.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 1957 ನಂತರದಲ್ಲಿ 16 ಚುನಾವಣೆಗಳು ( ಉಪಚುನಾವಣೆ ಸೇರಿ) ನಡೆದಿದ್ದು, ಲಿಂಗಾಯತ ಅಭ್ಯರ್ಥಿಗಳು ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ್ದರೆ, ಬ್ರಾಹ್ಮಣರು 2 ಬಾರಿ, ಮುಸ್ಲಿಂ ಹಾಗೂ ಕುರುಬ ಸಮಾಜದ ಅಭ್ಯರ್ಥಿಗಳು ತಲಾ ಒಮ್ಮೆ ಗೆದ್ದಿದ್ದಾರೆ. ದಲಿತರಿಗೆ ಅವಕಾಶ ಸಿಕ್ಕಿಲ್ಲ.

ಚುನಾವಣೆಗಳು ಜಾತಿ ಲೆಕ್ಕಾಚಾರದ ಮೇಲೆ ನಡೆಯುವುದು ಸಾಮಾನ್ಯ. ಬೇಳಗಾವಿ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಸೇರಿದ್ದು, ಲಿಂಗಾಯತರ ಪ್ರಾಬಲ್ಯವಿರುವ ಕ್ಷೇತ್ರ. ಎಲ್ಲ ರಾಜಕೀಯ ಪಕ್ಷಗಳು ಲಿಂಗಾಯತರಿಗೇ ಮಣೆ ಹಾಕಿವೆ. ಲಿಂಗಾಯತ ಹೊರತುಪಡಿಸಿ ಬೇರೆ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳು ದೊರೆತಿಲ್ಲ. ಮತದಾರರು ಒಂದು ವರ್ಗದ ಜೊತೆಗಿದ್ದೇವೆ ಎಂಬ ಸಂದೇಶವನ್ನು ನೀಡುತ್ತಲೇ ಬಂದಿದ್ದಾರೆ. ಆರಂಭದಿಂದಲೂ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಕಳೆದ ಎರಡು ದಶಕಗಳಿಂದ ಬಿಜೆಪಿ  ಹಿಡಿತ ಸಾಧಿಸಿದೆ.  ಎರಡು ಕ್ಷೇತ್ರಗಳಲ್ಲೂ ಲಿಂಗಾಯತ ಮತದಾರರೇ ನಿರ್ಣಾಯಕರಾಗಿದ್ದು, ಆ ಸಮಾಜದ ಅಭ್ಯರ್ಥಿಗಳಿಗೇ ಟಿಕೆಟ್ ನೀಡಲು ರಾಜಕೀಯ ಪಕ್ಷಗಳು ಮುಂದಾಗುತ್ತವೆ. 

ಅಲ್ಪಸಂಖ್ಯಾತರಿಗೆ ಒಮ್ಮೆ: 1957 ಹಾಗೂ 1962 ರಲ್ಲಿ ಬ್ರಾಹ್ಮಣ ಅಭ್ಯರ್ಥಿ ಬಿ.ಎನ್‌. ದಾತಾರ್ ಆಯ್ಕೆಯಾಗಿದ್ದರು. 1963 ರಲ್ಲಿ ನಡೆದ ಉಪಚುನಾವಣೆಯಲ್ಲಿ ಲಿಂಗಾಯತ ಸಮಾಜದ ಶಿವಾನಂದ ಕೌಜಲಗಿ ಅವರು ಬ್ರಾಹ್ಮಣ ಸಮುದಾಯದ ಜಗನ್ನಾಥರಾವ್ ಜೋಶಿ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದರು. 1967ರ ಚುನಾವಣೆಯಲ್ಲಿ ಎನ್.ಎಂ. ನಬೀಸಾಬ ಇಲ್ಲಿ ಅಯ್ಕೆಯಾದ ಏಕೈಕ ಅಲ್ಪಸಂಖ್ಯಾತ ಅಭ್ಯರ್ಥಿ ಎಂಬ ಕೀರ್ತಿಗೆ ಭಾಜನವಾಗಿದ್ದಾರೆ.

1971 ಹಾಗೂ 1977 ರಲ್ಲಿ ಸತತ 2 ಬಾರಿ ಎ.ಕೆ. ಕೊಟ್ರಶೆಟ್ಟಿ ಆಯ್ಕೆಯಾಗಿದ್ದರು. ಸತತ 4 ಬಾರಿ (1980, 1984, 1989, 1991) ಗೆದ್ದು ಕ್ಷೇತ್ರದಲ್ಲಿ ಅತಿ ಹೆಚ್ಚಿನ ಗೆಲುವು ದಾಖಲೆ ಸಾಧಿಸಿದವರು ಕಾಂಗ್ರೆಸ್‌ನ ಎಂಬ ಎಸ್.ಬಿ. ಸಿದ್ನಾಳ ಅವರದು. ಅವರ ನಂತರ ಬಿಜೆಪಿಯ ಸುರೇಶ ಅಂಗಡಿ ಅವರು ಸಹಾ ನಾಲ್ಕು ಸಲ ಗೆಲುವು ಸಾಧಿಸಿದ್ದರು. ಜಿಲ್ಲೆಯ ಸಮೀಪದ ಸಮಾಜದವರೇ, ಪ್ರತಿಸ್ಪರ್ಧಿಯಾಗಿದ್ದವರು ವೀರಶೈವ-ಲಿಂಗಾಯತದಿಂದ ಅಂದರೆ 1996ರಲ್ಲಿ ಜನತಾದಳದಿಂದ ಶಿವಾನಂದ ಕೌಜಲಗಿ ಬಿಜೆಪಿ ಬಾಬಾಗೌಡ ಪಾಟೀಲರ ವಿರುದ್ಧ ಗೆದ್ದಿದ್ದರು. 1998ರಲ್ಲಿ ಎಸ್. ಬಿ. ಸಿದ್ನಾಳರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಾಬಾಗೌಡ ಪಾಟೀಲ ಗೆಲುವು ಸಾಧಿಸಿದ್ದರು.

8 ಚುನಾವಣೆಗಳ ನಂತರ: 1999 ರಲ್ಲಿ ಕುರುಬ ಸಮಾಜದ ಅಮರಸಿಂಹ ಪಾಟೀಲ ಬಿಜೆಪಿಯ ಬಾಬಾಗೌಡ ಪಾಟೀಲ ವಿರುದ್ಧ ಗೆಲುವಿನ ನಗೆ ಬೀರಿದ್ದರು. ಹೀಗಾಗಿ, 1971ರ ನಂತರ ಅಂದರೆ ಸತತ 8 ಚುನಾವಣೆಗಳ ನಂತರ ಲಿಂಗಾಯತರೇತರ ಅಭ್ಯರ್ಥಿಯೊಬ್ಬರು ಗೆದ್ದಿದ್ದು ಇತಿಹಾಸ. ಹಿಂದಿನ 4 ಚುನಾವಣೆಗಳಲ್ಲಿ (2004, 2009,2014, 2018) ಬಿಜೆಪಿಯ ಸುರೇಶ ಅಂಗಡಿ ಸತತವಾಗಿ ಗೆಲುವು ಸಾಧಿಸಿದ್ದರು. ಆದರೆ, ಅವರು ಕೋವಿಡ್‌ ಸೋಂಕಿನಿಂದ ಮೃತಮಟ್ಟ ಕಾರಣಕ್ಕೆ ನಡೆದ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪಚುನಾವಣೆಯಲ್ಲಿ ಸುರೇಶ ಅಂಗಡಿ ಅವರ ಧರ್ಮಪತ್ನಿ ಮಂಗಲಾ ಅಂಗಡಿ ಗೆಲುವು ಸಾಧಿಸಿ ಇತಿಹಾಸ ಬರೆದಿದ್ದರು.

ಆದರೆ, ಈ ಸಲ ರಾಜ್ಯದ ಅತ್ಯಂತ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಕಣಕ್ಕಿಳಿಸುವ ಮೂಲಕ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ಹಿಡಿತಕ್ಕೆ ಕೊಂಡೊಯ್ಯುವ ಪಣತೊಟ್ಟಿದ್ದಾರೆ. ಆದರೆ ಧಾರವಾಡದಿಂದ ವಲಸೆ ಬಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಅನುಭವ ಹಾಗೂ ಹಿರಿತನ ಯಾವ ರೀತಿ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಯಾರೇ ಗೆದ್ದರು ಲಿಂಗಾಯತರ ಹಿಡಿತ ಮತ್ತೆ ಗಟ್ಟಿಯಾಗಲಿದೆ.

ಇನ್ನೊಂದು ಕ್ಷೇತ್ರ ಚಿಕ್ಕೋಡಿ, ಹಿಂದೆ ಮೀಸಲು ಕ್ಷೇತ್ರವಾಗಿತ್ತು. 1967ರಿಂದ ಸತತವಾಗಿ 7 ಬಾರಿ ಕಾಂಗ್ರೆಸ್‌ನ ಬಿ. ಶಂಕರಾನಂದ  ಅವರು ವಿಜಯದ ನಗೆ ಬೀರಿದ್ದರು, ನಂತರ ಬಿಜೆಪಿಯ ರಮೇಶ ಜಿಗಜಿಣಗಿ 3 ಬಾರಿ ವಿಜೇತರಾಗಿದ್ದರು. ಕ್ಷೇತ್ರ ಪುನರ್‌ವಿಂಗಡಣೆ ನಂತರ ಈ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಯಿತು. ಬಳಿಕವೂ ಅಂದರೆ 2009, 2014 ಹಾಗೂ 2019ರಲ್ಲಿ ಲಿಂಗಾಯತರಾದ ರಮೇಶ ಕತ್ತಿ, ಪ್ರಕಾಶ ಹುಕ್ಕೇರಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಅವರು ವಿಜಯಿಯಾಗಿದ್ದಾರೆ.

ಈ ಚುನಾವಣೆಯಲ್ಲೂ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲೂ ಲಿಂಗಾಯತರ ಹೆಸರುಗಳೇ ಮುನ್ನಲೆಗೆ ಬಂದಿದ್ದವು. ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರ ಹೆಸರಿನ ಜೊತೆ ಮಾಜಿ ಸಂಸದ ರಮೇಶ್ ಕತ್ತಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿತ್ತು. ಆದರೆ, ಕುರುಬ ಸಮಾಜಕ್ಕೆ ಸೇರಿರುವ ಲಕ್ಷ್ಮಣರಾವ್ ಚಿಂಗಳೆ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಚಿಕ್ಕೋಡಿಯಲ್ಲಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಾತಾವರಣ ಇತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರಿಗೆ ಬೆಳಗಾವಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ನೀಡಿ ಸಮಾಧಾನಪಡಿಸಲಾಯಿತು. ಬದಲಿಗೆ ಚಿಕ್ಕೋಡಿ ಮತಕ್ಷೇತ್ರದ ಟಿಕೆಟ್ ಅನ್ನು ಪ್ರಭಾವಿ ಸಚಿವ ಸತೀಶ ಜಾರಕಿಹೊಳಿ ಅವರ ಸುಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ನೀಡಲಾಯಿತು. ಹೀಗಾಗಿ, ಪ್ರಸಕ್ತ ಚುನಾವಣೆಯಲ್ಲಿ ಪೈಪೋಟಿ ನಿಶ್ಚಿತವಾಗಿದ್ದು, ಚಿಕ್ಕೋಡಿಯಲ್ಲಿ ಈ ಬಾರಿ ಕದನ ಕುತೂಹಲ ಕೆರಳಿಸಿದೆ.