ಬೆಳಗಾವಿ: ಜನ್ಮತಃವಾಗಿ ವಾಲ್ವುಲರ ಅರೊಟಿಕ್ ಸ್ಟೆನೋಸಿಸ್ ಎಂಬ ಅಪರೂಪದ ಹೃದ್ರೋಗ ಖಾಯಿಲೆಯಿಂದ ಬಳಲುತ್ತಿದ್ದ 10 ಹಾಗೂ 15 ದಿನಗಳ ಹಸುಗೂಸುಗಳ ಹೃದ್ರೋಗಕ್ಕೆ ಇಂಟರವೆನ್ಶನಲ್ ಚಿಕಿತ್ಸಾ ಪ್ರಕ್ರಿಯೆ ನೆರವೇರಿಸುವದರ ಮೂಲಕ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ.
ತಾಯಿಯ ಉದರದಲ್ಲಿರುವಾಗಲೇ ಭ್ರೂಣವು ಹೃದ್ರೋಗದಿಂದ ಬಳಲುತ್ತಿರವದು ಕಂಡು ಬಂದಿತ್ತು. ಪ್ರಸವಪೂರ್ವದಿಂದಲೇ ತಾಯಿಯನ್ನು ಆರೈಕೆ ಮಾಡುತ್ತ ಭ್ರೂಣದ ಮೇಲೆ ನಿಗಾ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹುಟ್ಟಿದ ತಕ್ಷಣ ಸಮಗ್ರವಾಗಿ ತಾಪಸಣೆಗೊಳ್ಪಡಿಸಿದಾಗ ಮಹಾಅಪಧಮನಿಯ ಕವಾಟದಲ್ಲಿನ ತೊಂದರೆಯಿಂದಾಗಿ ಮಗು ಬದಕುಳಿಯುವದು ಅಸಾದ್ಯವಾಗಿತ್ತು. ಇದನ್ನು ಗಮನಿಸಿದ ಹಿರಿಯ ಮಕ್ಕಳ ಹೃದ್ರೋಗ ತಜ್ಞ ಡಾ. ವೀರೇಶ್ ಮಾನ್ವಿ ಅವರು ಮಕ್ಕಳನ್ನು ಚಿಕಿತ್ಸ ಪ್ರಕ್ರಿಯೆಗೆ ಒಳಪಡಿಸಿ ಮಹಾಅಪಧಮನಿಯ ಕವಾಟವನ್ನು ಸರಿಪಡಿಸಿ ಜೀವ ಉಳಿಸಿದರು. ಪ್ರಸವ ಪೂರ್ವದಲ್ಲಿಯೇ ಉದರದಲ್ಲಿರುವ ಭ್ರೂಣವು ಯಾವ ಆರೋಗ್ಯ ತೊಂದರೆಯಿಂದ ಬಳಲುತ್ತಿದೆ ಎಂಬುದನ್ನು ಕಂಡು ಹಿಡಿಯಲು ಸಾಧ್ಯ.
ಶಿಶುಗಳು ಜನನದ ನಂತರ ತೀವ್ರತರವಾದ ರೋಗಲಕ್ಷಣಗಳಿಂದ ಬಳಲುತ್ತಿದ್ದವು. ಆದ್ದರಿಂದ (ಬಲೂನ ಅರೋಟಿಕ್ ವಾಲ್ವಲೋಪ್ಲಾಸ್ಟಿ) ಬಲೂನ್ ಮಹಾಪಧಮನಿಯ ವಾಲ್ವುಲೋಪ್ಲ್ಯಾಸ್ಟಿ (ಬಿಎವಿ) ಚಿಕಿತ್ಸಾ ಪ್ರಕ್ರಿಯೆಯನ್ನು ನೆರವೇರಿಸಲಾಯಿತು. ಡಾ. ವೀರೇಶ ಮಾನ್ವಿ ಅವರಿಗೆ ಡಾ. ಆನಂದ ವಾಘರಾಳಿ, ಡಾ. ಕೇದಾರ, ಡಾ.ಮಹಾಂತೇಶ ಮುದಕನಗೌಡರ ನೇತೃತ್ವದ ತಂಡವು ಅರವಳಿಕೆ, ಡಾ ಎಸ್ ಎಂ ಧಡೇದ ಹಾಗೂ ಡಾ ಮನೀಶಾ ಭಾಂಡನಕರ ಅವರು ತೀವ್ರನಿಗಾ ಘಟಕದಲ್ಲಿ ಆರೈಕೆ ಮಾಡಿ ಚಿಕಿತ್ಸಾ ಪ್ರಕ್ರಿಯೆಗೆ ಸಹಕರಿಸಿದರು. ರಾಜೇಶ್ ಅವರು ತಾಂತ್ರಿಕ ಸಹಾಯ ಕಲ್ಪಿಸಿದರು.
ಆಸ್ಪತ್ರೆಯು ನವಜಾತ ಶಿಶು ಹಾಗೂ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಳಲ್ಲಿ ಅತ್ಯಾಧುನಿಕ ಆರೈಕೆ ನೀಡುತ್ತಿದೆ. ಚಿಕ್ಕಮಕ್ಕಳ ಹೃದಯ ಶಸ್ತ್ರಚಿಕಿತ್ಸಕ ಡಾ.ಗಣಂಜಯ್ ಸಾಳವೆ ಮತ್ತು ಮಕ್ಕಳ ಇಂಟೆನ್ಸವಿಸ್ಟ ಡಾ. ನಿಧಿ ಗೋಯೆಲ್ ಮಾನ್ವಿ ಅವರ ಸಹಕಾರದಿಂದ ಅಪರೂಪದ ಚಿಕಿತ್ಸಾ ಪ್ರಕ್ರಿಯೆ ನಡೆಸಿ ಇಬ್ಬರು ನವಜಾತ ಶಿಶುಗಳಿಗೆ ಜೀವದಾನ ನೀಡಿದ ಡಾ. ವಿರೇಶ ಮಾನ್ವಿ ಹಾಗೂ ಅವರ ತಂಡವನ್ನು ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಆಡಳಿತ ಮಂಡಳಿಯ ಸದಸ್ಯರು ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ.(ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.