ಬೆಳಗಾವಿ : ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಎಷ್ಟು ಅನುದಾನ ಬಂದಿದೆ ಎನ್ನುವುದನ್ನು ಸಾಕ್ಷಿ ಸಮೇತ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದ 12 ಪದಾಧಿಕಾರಿಗಳು ಸಹ್ಯಾದ್ರಿ ನಗರದ ಶಾಸಕರ ನಿವಾಸದ ಬಳಿ ತೆರಳಿದ್ದರು. ಶಾಸಕರ ಅನುಪಸ್ಥಿತಿಯಲ್ಲಿ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಮೃಣಾಲ ಹೆಬ್ಬಾಳಕರ್, ಗ್ರಾಮೀಣ ಕ್ಷೇತ್ರದಲ್ಲಿ ಕಳೆದ 6 ವರ್ಷದಿಂದಲೂ ಸಾಕಷ್ಟು ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಇನ್ನಷ್ಟು ಅಭಿವೃದ್ಧಿಯಾಗಬೇಕೆನ್ನುವ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ನೀವೂ ಸೇರಿದಂತೆ ಎಲ್ಲರೂ ಸಹಕರಿಸಬೇಕು. ಅಭಿವೃದ್ಧಿಯ ಕಳಕಳಿಯಿಂದ ನೀವು ಇಲ್ಲಿಗೆ ಬಂದಿದ್ದರೆ ಅದಕ್ಕೆ ಸ್ವಾಗತ. ನಿಮ್ಮ ಪ್ರಶ್ನೆಗಳಿಗೆ ಶಾಸಕರು ಸೂಕ್ತ ರೀತಿಯಲ್ಲಿ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾಧ್ಯಮಗಳೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷ ಗ್ಯಾರಂಟಿಯ ಭರವಸೆಗಳನ್ನು ನೀಡಿದೆ. ಸರ್ಕಾರದ ಅವ್ಯವಸ್ಥೆಯಿಂದ ರಾಜ್ಯ ದಿವಾಳಿಯ ಅಂಚಿನಲ್ಲಿದೆ. ಕಳೆದ ಹತ್ತು ತಿಂಗಳಲ್ಲಿ ಎಷ್ಟು ಹಣ ತಂದಿದ್ದಿರಿ ಹಾಗೂ ಯಾವ ಕೆಲಸಕ್ಕೆ ಎಂದು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಕಳೆದ 6 ವರ್ಷದಿಂದ ಗ್ರಾಮೀಣ ಕ್ಷೇತ್ರದಲ್ಲಿ ಎಂದೂ ಕಾಣದಷ್ಟು ಅಭಿವೃದ್ಧಿಯಾಗಿದೆ. ಕಳೆದ ಅವಧಿಯಲ್ಲಿ 1800 ಕೋಟಿ ರೂ.ಗಳಿಗಿಂತ ಹೆಚ್ಚು ಅನುದಾನ ತಂದಿದ್ದಾರೆ. ಹಾಗಾಗಿಯೇ ಜನರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತ ನೀಡಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಪುನರಾಯ್ಕೆ ಮಾಡಿದ್ದಾರೆ. ಈಗ ಪುನಃ ಗ್ರಾಮೀಣ ಕ್ಷೇತ್ರದ ಕೆರೆ ತುಂಬುವ ಯೋಜನೆಗೆ 800 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ. ಅಭಿವೃದ್ಧಿಯ ಅರ್ಥ ನಿಮಗೆ ಗೊತ್ತಿದೆಯೇ? ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿದರು.
ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ, ಪ್ರದೀಪ ಪಾಟೀಲ, ಲಿಂಗರಾಜ ಹಿರೇಮಠ, ವಿಠ್ಠಲ ಕಲ್ಲಣ್ಣವರ, ಪ್ರಸಾದ ಬಾಚಿಕರ, ಶಾದ್ಯಕಶ್ರೀ ಹಿರೇಮಠ, ಗುನವಂತ ಸುತಾರ, ಚಂದ್ರಶೇಖರ್ ವಕ್ಕುಂದ, ವಿಲಾಸ ತಶೀಲ್ದಾರ್, ಗಣಪತರಾವ್ ದೇಸಾಯಿ, ಗುರು ಹಲಗತ್ತಿ, ರಾಜು ಖನಗಾಂವಕರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಅವರಿಗೂ ಬಿಜೆಪಿ ನಾಯಕರು ಮನವಿಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಗೀತಾ ಸುತಾರ್, ಮುಖಂಡರಾದ ಈರಯ್ಯ ಖೋತ್, ವಿಜಯ್ ಕೊಡಗಾನೂರ, ರವಿ ಪಾಟೀಲ್, ಮಹಾಂತೇಶ್ ವಕ್ಕುಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.