ಬೆಳಗಾವಿ : ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡಾ-ಗೊಲ್ಲರಹಟ್ಟಿ ಸೇರಿದಂತೆ ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿ ಕೊಡಲಾಗಿತ್ತುಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 164 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ, ಈವರೆಗೆ 114 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಈ ಪೈಕಿ 93 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 30 ಗ್ರಾಮಗಳು ಬಾಕಿ ಉಳಿದಿದ್ದು, 20 ಗ್ರಾಮಗಳು ವಾಪಾಸ್ ಬಂದಿವೆ. ಇದಕ್ಕೆ ಕಾರಣವೇನು? ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದು ಬಡವರ ಕೆಲಸ. ಬೆಳಗಾವಿ ರಾಜ್ಯದಲ್ಲೇ ಅತಿದೊಡ್ಡ ಜಿಲ್ಲೆಯಾಗಿದ್ದು, ಇಷ್ಟು ದೊಡ್ಡ ಜಿಲ್ಲೆಗೆ 164 ತುಂಬಾ ಸಣ್ಣ ಸಂಖ್ಯೆ. ಜಿಲ್ಲೆಯಲ್ಲಿ ಯಾವ ಜನವಸತಿ ಪ್ರದೇಶ ಕಂದಾಯ ಗ್ರಾಮಗಳಾಗಲು ಅರ್ಹ ಎಂಬ ಮಾಹಿತಿ ಗ್ರಾಮ ಲೆಕ್ಕಾಧಿಕಾರಿಗೆ ಇರುತ್ತದೆ. ಹೀಗಾಗಿ ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ್ ಜೊತೆಗೆ ಚರ್ಚಿಸಿ ಮತ್ತಷ್ಟು ತಾಂಡಾ, ಹಟ್ಟಿ,‌ ಗೊಲ್ಲರಹಟ್ಟಿಗಳನ್ನು ಗುರುತಿಸಿ ಪ್ರಸ್ತಾವನೆ ಕಳುಹಿಸಿ ಎಂದು ತಾಕೀತು ಮಾಡಿದರು.

ಕಂದಾಯ ಗ್ರಾಮ ಅಂತಿಮ ಅಧಿಸೂಚನೆ ಹೊರಡಿಸುತ್ತಿದ್ದಂತೆ ಜನರಿಗೆ ಹಕ್ಕು ಪತ್ರ ನೀಡುವ ಕೆಲಸವಾಗಬೇಕು. ಈ ಬಾರಿ ಡಿಜಿಟಲ್‌ ಹಕ್ಕು ಪತ್ರ ನೀಡಲು ಉದ್ದೇಶಿಸಿದ್ದು, ಹಕ್ಕುಪತ್ರದ ಜೊತೆಗೆ ಅವರಿಗೆ ನೋಂದಣಿಯೂ ಮಾಡಿಕೊಡಬೇಕು. ಫಲಾನುಭವಿಗಳು ಮತ್ತೆ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಬಾರದು ಎಂದು ಸೂಚಿಸಿದರು.

ಬಗರ್ ಹುಕುಂ ಅರ್ಜಿ ವಿಲೇಗೆ ಒತ್ತು: ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಹರಿಗೆ ಮಾತ್ರ ಜಮೀನು ಮಂಜೂರು ಮಾಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, “ಈ ಹಿಂದೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ವೇಳೆ ಅನರ್ಹರಿಗೂ ಜಮೀನು ಮಂಜೂರು ಮಾಡಲಾಗಿದೆ.‌ ನಿಯಮ ಮೀರಿ ಸಾಕಷ್ಟು ಅಕ್ರಮ ನಡೆಸಲಾಗಿದೆ. ಆದರೆ ಈ ಬಾರಿ ಅಂತಹ ಯಾವುದೇ ಪ್ರಹಸನಗಳಿಗೆ ಆಸ್ಪದ ಇಲ್ಲ. ಬಗರ್ ಹುಕುಂ ಸಭೆಯ ಬಯೋ ಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಪಡೆಯಬೇಕು” ಎಂದು ತಾಕೀತು ಮಾಡಿದರು.

ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ಮುಂದಿನ 6 ತಿಂಗಳಲ್ಲಿ ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು,ಸಾಗುವಳಿ ಚೀಟಿ ನೀಡುತ್ತಿದ್ದಂತೆ ಹೊಸ ಸರ್ವೇ ನಂಬರ್ ಪೋಡಿಯನ್ನೂ ಸಹ ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ತನ್ನ ವ್ಯಾಪ್ತಿಯ ಸರ್ಕಾರಿ ಭೂಮಿಗೆ ತೆರಳಿ ಪರಿಶೀಲಿಸಿ ಆ್ಯಪ್‌ನಲ್ಲಿ ದಾಖಲಿಸಬೇಕು ಎಂದು ಸೂಚಿಸಿದರು.