ಬೆಳಗಾವಿ: ‘ದೇಶದ ಜನ ಏನನ್ನು ಬಯಸಿದ್ದಾರೆ ಎಂಬುದನ್ನು ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ತಿಳಿಸಿದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ನಾವು ಲೋಕಸಭೆ ಚುನಾವಣೆಗೆ ತಯಾರಿ ನಡೆಸಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಂದಿಲ್ಲಿ ಹೇಳಿದರು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢ ವಿಧಾನಸಭಾ ಚುನಾವಣೆಯ ಫಲಿತಾಂಶ ಬಿಜೆಪಿಯಲ್ಲಿ ಆತ್ಮವಿಶ್ವಾಸ, ಜವಾಬ್ದಾರಿ ಇಮ್ಮಡಿಗೊಳಿಸಿದೆ ಎಂದ ಅವರು, ಕಾಂಗ್ರೆಸ್‌ನ ಭರವಸೆಗಳನ್ನು ಜನ ತಿರಸ್ಕರಿಸಿದ್ದಾರೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಮೂರು ರಾಜ್ಯಗಳ ಚುನಾವಣೆ ಗೆಲುವಿಗೆ ದೇಶದ ಭದ್ರತೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಹಿರಿಮೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲಿನ ನಂಬಿಕೆಯೇ ಕಾರಣ’ ಎಂದರು.

‘ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡರೆ ರಾಜ್ಯದಲ್ಲಿ ಗರಿಷ್ಠ ಸ್ಥಾನ ಗೆಲ್ಲಲು ಸಾಧ್ಯವಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ದೂಳೀಪಟ ಮಾಡುತ್ತೇವೆ’ ಎಂದರು.

‘ಉತ್ತರ ಕರ್ನಾಟಕದ ಸಮಸ್ಯೆಗಳ ನಿವಾರಣೆಗೆ ಬೆಳಗಾವಿಯ ಸುವರ್ಣ ವಿಧಾನಸೌಧ ನಿರ್ಮಿಸಲಾಗಿದೆ. ಈಗ ಅಧಿವೇಶನ ಆರಂಭವಾಗಿದೆ. ಇನ್ನೊಂದೆಡೆ ಉತ್ತರ ಕರ್ನಾಟಕವೂ ಸೇರಿ ಇಡೀ ರಾಜ್ಯ ಬರಗಾಲದಿಂದ ತತ್ತರಿಸಿದೆ. ಈ ಅಧಿವೇಶನದಲ್ಲಿ ಸಮಸ್ಯೆಗಳಿಗೆ ಸ್ಪಂದನೆ ಸಿಗಬಹುದು ಎಂಬ ನಿರೀಕ್ಷೆ ಜನರಲ್ಲಿದೆ’ ಎಂದರು.