ಬೆಳಗಾವಿ: ನಗರ ಬೆಳೆದಂತೆಲ್ಲ ಕಸ ಸಂಗ್ರಹವೂ ಅಧಿಕಗೊಳ್ಳುತ್ತಿದೆ. ಕಸ ವಿಘಟನೆ ಮತ್ತು ವಿಲೆವಾರಿ ಮಾಡುವ ಕಠಿಣ ಸಂದೀಗ್ದತೆಗೆ ಮಹಾನಗರ ಪಾಲಿಕೆ ಸಿಲುಕಿದೆ. ಅದರಲ್ಲಿಯೂ ಮುಖ್ಯವಾಗಿ ಪರಿಸರ ಮಾಲಿನ್ಯ ತಡೆಗೆ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಕೂಡ ಪ್ರತಿದಿನ ಸಾಕಷ್ಟು ಪ್ಲಾಸ್ಟಿಕ್ ಸಂಗ್ರವಾಗುತ್ತಿದೆ. ಇದೇ ಪ್ಲಾಸ್ಟಿಕ್ನ್ನು ಪೌಡರನ್ನಾಗಿ ತಯಾರಿಸಿ ಅದರಿಂದ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ ಬೆಳಗಾವಿ ಮಹಾನಗರ ಪಾಲಿಕೆ. ಯೋಜನೆಯಂತೆ ಎಲ್ಲವೂ ಸುಗಮವಾಗಿ ನಡೆದರೆ ಕೆಲವೇ ದಿನಗಳಲ್ಲಿ ಕಸವೆಂದು ಎಸೆದ ಪ್ಲಾಸ್ಟಿಕ್ನಿಂದ ಬೆಳಗಾವಿ ರಸ್ತೆಗಳು ನಿರ್ಮಾಣವಾಗುವ ಸಾಧ್ಯತೆ ಇದೆ.
ಏಕ್ ಬಳಕೆಯ ಪ್ಲಾಸ್ಟಿಕ್ಗೆ ಸಂಪೂರ್ಣವಾಗಿ ನಿಷೇಧ ಹೇರಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಬೆಳಗಾವಿ ನಗರದಲ್ಲಿಯೂ ಇಂಥ ಪ್ಲಾಸ್ಟಿಕ್ಗೆ ಸಂಪೂರ್ಣ ನಿಷೇಧವಿದ್ದರೂ ಕೂಡ, ನಗರದ ವಿವಿಧ ಅಂಗಡಿಗಳಲ್ಲಿ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ತ್ಯಾಜ್ಯದೊಂದಿಗೆ ಪ್ಲಾಸಿಕ್ ಸಂಗ್ರಹವಾಗುತ್ತಿದೆ. ಪ್ರತಿದಿನ ಸುಮಾರು 10 ಟನ್ಗೂ ಅಧಿಕ ಪ್ಲಾಸ್ಟಿಕ್ ಸಂಗ್ರವಾಗುತ್ತಿದೆ. ಅದೇ ಪ್ಲಾಸ್ಟಿಕ್ದಿಂದಲೇ ಪೌಡರ್ ಮಾಡಿ ರಸ್ತೆ ಡಾಂಬರೀಕರಣ ಮಾಡಲು ವಿನೂತನ ಯೋಜನೆಗೆ ಕೈಹಾಕಿದೆ ಮಹಾನಗರ ಪಾಲಿಕೆ.
ಬೆಳಗಾವಿ ಮಹಾನಗರದಲ್ಲಿ ಪ್ರತಿದಿನ ಸುಮಾರು 250ಕ್ಕೂ ಅಧಿಕ ಟನ್ ಕಸ ಸಂಗ್ರವಾಗುತ್ತಿದೆ. ಅದರಲ್ಲಿ 80 ಟನ್ ಒಣ ಹಾಗೂ 150 ಟನ್ ಹಸಿ ಕಸ ಸಂಗ್ರಹವಾದರೆ 10 ಟನ್ ಪ್ಲಾಸ್ಟಿಕ್ ಸಂಗ್ರವಾಗುತ್ತಿದೆ. ಹಸಿ ಕಸದಿಂದ ಗೊಬ್ಬರ ತಯಾರಿಸಿದರೆ, ಒಣ ಕಸವನ್ನು ಬಾಗಲಕೋಟೆ ಜಿಲ್ಲೆಯಲ್ಲಿರುವ ಸಿಮೆಂಟ ಕಾರಖಾನೆಗಳಿಗೆ ಕಳುಹಿಸಲಾಗುತ್ತಿದೆ. ಉಳಿದ ಪ್ಲಾಸ್ಟಿಕ್ನಿಂದ ಪೌಡರ ತಯಾರಿಸಿ ಅದರಿಂದ ರಸ್ತೆ ನಿರ್ಮಿಸಲು ಯೋಜಿಸಲಾಗಿದ್ದು, ಪಾಲಿಕೆಯಲ್ಲಿ ರಸ್ತೆ ನಿರ್ಮಿಸುವ ಗುತ್ತಿಗೆದಾರರು ಕಡ್ಡಾಯವಾಗಿ ಪ್ಲಾಸ್ಟಿಕ್ ಪೌಡರ್ ಬಳಸಬೇಕೆಂದು ಸೂಚಿಸಲಾಗಿದೆ. ಹೀಗಾಗಿ ಪ್ಲಾಸ್ಟಿಕ್ಗೆ ಹೆಚ್ಚಿನ ಬೇಡಿಕೆ ಬಂದಿದ್ದು, ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯ ಪ್ಲಾಸ್ಟಿಕ್ ಅನ್ನು ಬೇರ್ಪಡಿಸಿ ಯಂತ್ರದ ಸಹಾಯದಿಂದ ಪುಡಿ ಮಾಡಿ ರಸ್ತೆಗೆ ಬಳಸಿಕೊಳ್ಳುವಳ್ಳುವ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಈ ಪ್ಲಾಸ್ಟಿಕ್ಅನ್ನು ಸಿಮೆಂಟ ತಯಾರಿಸಲು ಬಳಸುತ್ತಿರುವದರಿಂದ ಉಚಿತವಾಗಿ ಕಾರ್ಖಾನೆಗೆ ಹೋಗುತ್ತಿದೆ. ಆದರೆ ಈಗ ಇದೇ ಪ್ಲಾಸ್ಟಿಕ್ ಬೇರೆ ಕಡೆಗೆ ಕಳಸಿಕೊಡದೇ ನಮ್ಮಲ್ಲಿಯೇ ಬಳಕೆ ಮಾಡಿ ಡಾಂಬರ್ ರಸ್ತೆ ನಿರ್ಮಿಸಲು ಪಾಲಿಕೆ ಮುಂದಾಗಿದೆ. ಕಾಮಗಾರಿಗೆ ಅಕ್ಟೋಬರ್ ತಿಂಗಳಲ್ಲಿಯೇ ಚಾಲನೆ ಸಿಗುವ ಸಾಧ್ಯತೆ ಇತ್ತು. ಆದರೆ ಪಾಲಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರು, ಪಾಲಿಕೆ ಆಯುಕ್ತರು ಹಾಗೂ ರಾಜಕೀಯ ಸಂಘರ್ಷದಿಂದಾಗಿ ಕಾಮಗಾರಿಗೆ ಚಾಲನೆ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ.
ವಿಶೇಷತೆ : ಪ್ಲಾಸ್ಟಿಕ್ ಪೌಡರ್ನಿಂದ ಪರಿಸರ ಮಾಲಿನ್ಯ ತಡೆ ಸಾಧ್ಯತೆ. 200 ಮೀಟರ್ ಉದ್ದದ ರಸ್ತೆಗೆ 250ರಿಂದ 300 ಕೆಜಿ ಪ್ಲಾಸ್ಟಿಕ್ ಅವಶ್ಯಕತೆ. ಮುಂದಿನ ದಿನಮಾನದಲ್ಲಿ ರಸ್ತೆ ಡಾಂಬರೀಕರಣಕ್ಕೆ ಪ್ಲಾಸ್ಟಿಕ್ ಪೌಡರ್ ನಿರ್ಮಾಣ ಕಡ್ಡಾಯವಾಗುವ ಸಾಧ್ಯತೆ. ಭವಿಷ್ಯದಲ್ಲಿ ಪ್ಲಾಸ್ಟಿಕ್ ಪೌಡರ್ ಬೇಡಿಕೆ ಹೆಚ್ಚಳ. ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿದ್ದರಿಂದ ಪಾಲಿಕೆಯಿಂದ ಪ್ಲಾಸ್ಟಿಕ್ ಜಪ್ತಿ. ಪ್ಲಾಸ್ಟಿಕ್ ಪೌಡರ್ ಬಳಕೆ ಹೆಚ್ಚಾದಂತೆ ಪ್ಲಾಸ್ಟಿಕ್ ಕೊರತೆೆ ಆಗುವ ಸಾಧ್ಯತೆಯೂ ಇದೆ.
ಬೆಳಗಾವಿ ಪಾಲಿಕೆ ವತಿಯಿಂದ ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ಪೌಡರ್ ಬಳಸಿ ರಸ್ತೆ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಸಲಕರಣೆಗಳು, ರಸ್ತೆ ನಿರ್ಮಾಣಕ್ಕೆ ಬೇಕಾಗುವ ಪ್ಲಾಸ್ಟಿಕ್ ಪೌಡರ್ ತಯಾರಾಗಿದೆ. ಶೀಘ್ರವೇ ಈ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಈಗ ಪಾಲಿಕೆ ಎದುರಿನ ರಸ್ತೆಯನ್ನು ಪ್ರಾಯೋಗಿಕವಾಗಿ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಅವರು ತಿಳಿಸಿದ್ದಾರೆ.
ಬೆಳಗಾವಿ ನಗರದಲ್ಲಿ ನಿರ್ಮಾಣವಾಗಲಿದೆ ಪ್ಲಾಸ್ಟಿಕ್ ರಸ್ತೆ
