ಬೆಳಗಾವಿ,: ಗರ್ಭಾವಸ್ಥೆಯಲ್ಲಿರುವಾಗಲೇ ಡಿ-ಟ್ರಾನ್ಸ್ಪೊಸಿಷನ್ ಆಫ್ ದಿ ಗ್ರೇಟ್ ಆರ್ಟೀಸ್ ಎಂಬ ಅಪರೂಪದ ಹೃದಯ ರೋಗದಿಂದ ಭ್ರೂಣವು ಬಳಲುತ್ತಿತ್ತು. ಹೃದ್ರೋಗದಿಂದ ಬಳಲುತ್ತಿರುವ ಭ್ರೂಣವನ್ನು ನಿರಂತರವಾಗಿ ಆರೈಕೆ ಮಾಡಿ, ಹುಟ್ಟಿದ ತಕ್ಷಣ ಕರುಳ ಬಳ್ಳಿ ಮೂಲಕ ಆಮ್ಲಜನಕ ನೀಡಿ, ನವಜಾತ ಶಿಶುವನ್ನು ಸ್ಥಿರವಾಗಿಸಿ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಜೀವದಾನ ನೀಡುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ.

ಗರ್ಭವತಿ ಮಹಿಳೆಯನ್ನು ಸ್ತ್ರೀರೋಗ ತಜ್ಞವೈದ್ಯರಾದ ಡಾ.ಮಂಜುನಾಥ ಹುಕ್ಕೇರಿ ಅವರು, ತಪಾಸಿಸಿದಾಗ ಗರ್ಭದಲ್ಲಿರುವ ಭ್ರೂಣವು ಡಿ-ಟ್ರಾನ್ಸ್ಪೊಸಿಷನ್ ಆಫ್ ದಿ ಗ್ರೇಟ್ ಆರ್ಟೀಸ್ ಎಂಬ ರೋಗದಿಂದ ಬಳಲುತ್ತಿರುವದನ್ನು ಪತ್ತೆ ಮಾಡಿ, ಚಿಕ್ಕ ಮಕ್ಕಳ ಹೃದ್ರೋಗ ತಜ್ಞರಾದ ಡಾ. ಡ್ಯಾನಿಶ್ ಮೆಮನ್ ಅವರಿಗೆ ತಿಳಿಸಿದರು. ಗರ್ಭಾವಸ್ಥೆಯಲ್ಲಿ ಮಗುವಿಗೆ ಯಾವುದೇ ತೊಂದರೆಯಾಗದಂತೆ ನಿರಂತರವಾಗಿ ಆರೈಕೆ ಮಾಡಿದರು. ಹುಟ್ಟಿದ ತಕ್ಷಣ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಡಾ. ಎಂ ಎಸ್ ಧಡೇದ ಅವರು ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಡಾ. ಡ್ಯಾನಿಶ್ ಮೆಮನ್ ಅವರು, ಮಗುವಿಗೆ ಬಲೂನ್ ಏಟ್ರಿಯಲ್ ಸೆಪ್ಟೋಸ್ಟೊಮಿ (ಬಿಎಎಸ್) ಎಂಬ ಪ್ರಕ್ರಿಯೆ ನೆರವೇರಿಸಿ ಮಗುವಿನ ದೇಹಕ್ಕೆ ಆಮ್ಲಜನಕಯುಕ್ತ ರಕ್ತದ ಪೂರೈಕೆಯನ್ನು ಸುಧಾರಿಸಲು ಹೊಕ್ಕುಳಬಳ್ಳಿಯ ಮೂಲಕ ಹೃದಯದೊಳಗೆ ರಂಧ್ರವನ್ನು ಮಾಡಿದರು. ಈ ಪ್ರಕ್ರಿಯೆಯನ್ನು ಈ ಭಾಗದಲ್ಲಿ ಪ್ರಥಮ ಬಾರಿಗೆ ನೆರವೇರಿಸಿದ ಪಾತ್ರಕ್ಕೆ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಪಾತ್ರವಾಗಿದೆ.

ಸಾಮಾನ್ಯವಾಗಿ ಹೃದಯದಲ್ಲಿ ಮಹಾಪಧಮನಿಗಳ ಸಾಮಾನ್ಯ ಸಂಪರ್ಕಗಳಿರುತ್ತವೆ. ಅಂದರೆ ಮಹಾಪಧಮನಿಯು ಎಡಬದಿಯಿಂದ ಮತ್ತು ಶ್ವಾಸಕೋಶದ ಅಪಧಮನಿ ಬಲಬದಿಯಿಂದ ರಚಿಸಲ್ಪಡುತ್ತವೆ. ಆದರೆ ಶಿಶುವಿನ ದೊಡ್ಡ ಅಪಧಮನಿಗಳು ಅದಲುಬದಲಾಗಿ ಸಂಪರ್ಕ ಹೊಂದಿದ್ದು, ಆಮ್ಲಜನಕರಹಿತ ರಕ್ತವನ್ನು ಬಲಕ್ಕೆ ಹಿಂತಿರುಗಿಸುತ್ತದೆ, ಶ್ವಾಸಕೋಶದ ಅಪಧಮನಿ ಎಡಕ್ಕೆ ಇರುವದರಿಂದ ಶ್ವಾಸಕೋಶದಿಂದ ಹಿಂತಿರುಗುವ ಆಮ್ಲಜನಕಯುಕ್ತ ರಕ್ತವನ್ನು ಮರಳಿ ಶ್ವಾಸಕೋಶಕ್ಕೆ ತೆಗೆದುಕೊಂಡು ಹೋಗುತ್ತದೆ. ಆಮ್ಲಜನಕಯುಕ್ತ ಮತ್ತು ಆಮ್ಲಜನಕ ರಹಿತವನ್ನು ತಾತ್ಕಾಲಿಕವಾಗಿ ಮಿಶ್ರಣ ಮಾಡುವ ಸ್ಥಳವಿಲ್ಲದಿದ್ದರೆ ರಕ್ತ ಪರಿಚಲನೆಯಲ್ಲಿನ ಈ ವ್ಯವಸ್ಥೆಯು ಸಾವಿಗೆ ಕಾರಣವಾಗುತ್ತದೆ.

ಅತ್ಯಂತ ಅಪರೂಪವಾದ ಇದನ್ನು ಅಪಧಮನಿಯ ಸ್ವಿಚ್ ಆಪರೇಷನ್ ಮೂಲಕ ಸರಿಪಡಿಸಲಾಗುತ್ತದೆ. ಈ ವಿಧಾನವನ್ನು ಜನಿಸಿದ 3 ವಾರಗಳಲ್ಲಿ ಮಾಡಬೇಕಾಗುತ್ತದೆ. ದೊಡ್ಡ ಅಪಧಮನಿಗಳನ್ನು ಅವುಗಳ ಕೋಣೆಗೆ ಸಾಮಾನ್ಯ ಸಂಪರ್ಕಕ್ಕೆ ಬದಲಾಯಿಸಲಾಗುತ್ತದೆ. ನವಜಾತ ಶಿಶುಗಳ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಇದು ಅತ್ಯಂತ ಮುಖ್ಯವಾಗಿದ್ದು, ತಾಂತ್ರಿಕವಾಗಿ ಬೇಡಿಕೆಯಿರುವ ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿದೆ ಹೃದಯದಿಂದ ರಕ್ತವನ್ನು ಸಾಗಿಸುವ ಎರಡು ಮುಖ್ಯ ಅಪಧಮನಿಗಳಾದ ಮಹಾಪಧಮನಿ ಮತ್ತು ಶ್ವಾಸಕೋಶದ ಅಪಧಮನಿಯನ್ನು ಬದಲಾಯಿಸಲಾಗುತ್ತದೆ. ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞವೈದ್ಯರಾದ ಡಾ.ಗಣಂಜಯ ಸಾಳ್ವೆ ಅವರು ಸತತ 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಕೇವಲ 3 ದಿನದಲ್ಲಿ ಚೇತರಿಸಿಕೊಂಡ ಮಗುವನ್ನು ಚಿಕ್ಕಮಕ್ಕಳ ಹೃದ್ರೋಗ ಇಂಟೆನ್ಸಿವಿಸ್ಟ ಡಾ. ನಿಧಿ ಗೊಯಲ್ ಅವರು ಆರೈಕೆ ಮಾಡಿದರು. 10 ದಿನಗಳ ನಂತರ ಗುಣಮುಖಗೊಂಡ ಮಗುವನ್ನು ಆಸ್ಪತ್ರೆಯಿಂದ ಬಿಡುಡೆಗೊಳಿಸಲಾಗಿದೆ. ಆರೋಗ್ಯ ಕರ್ನಾಟಕ ಮತ್ತು ಆಯುಷ್ಯಮಾನ ಭಾರತ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಶಸ್ತçಚಿಕಿತ್ಸೆಯನ್ನು ನೆರವೇರಿಸಲಾಗಿದೆ.

ಯಶಸ್ವ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ತಜ್ಞವೈದ್ಯರ ತಂಡವನ್ನು ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ, ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.