ಬೆಳಗಾವಿ,: ನಾವು ಸೇವಿಸುವ ಆಹಾರ ಜೀರ್ಣಿಸಲು ಅನುವಾಗುವ ಪಿತ್ತರಸ ನೀಡುತ್ತ ದೇಹದ ಶಕ್ತಿಗೆ ಸಕ್ಕರೆ ಅಂಶ ಹಾಗೂ ಪೋಷಕಾಂಶಗಳನ್ನು ಉತ್ಪಾದಿಸಿ, ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುವು ಕಾರ್ಯದೊಂದಿಗೆ ರೋಗನಿರೋಧಕ ನಿಯಂತ್ರಣ ಸೇರಿದಂತೆ 500 ಕ್ಕೂ ಹೆಚ್ಚು ಅಗತ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಆದರೂ ಕೂಡ ಆಧುನಿಕ ಜೀವನಶೈಲಿಗೆ ಆಹಾರಪದ್ದತಿ, ದೈಹಿಕ ಚಟುವಟಿಕೆ ಇಲ್ಲದಿರುವದರಿಂದ ಬೊಜ್ಜು,ಮಧುಮೇಹ ಮತ್ತು ಮದ್ಯಪಾನದಿಂದ ಯಕೃತ್ತಿನ ಖಾಯಿಲೆಗಳು ಭಾರತ ಸೇರಿದಂತೆ ವಿಶ್ವದಾದ್ಯಂತ ಹೆಚ್ಚುತ್ತಿರುವದು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಯಕೃತ್ತ(ಲೀವರ). ನಮ್ಮ ದೇಹದಲ್ಲಿರುವ ಅತೀ ದೊಡ್ಡದಾದ ಅಂಗವಾದ ಲೀವರ ಅನೇಕ ಪ್ರಮುಖ ಕಾರ್ಯಗಳನ್ನು ನಿಭಾಯಿಸುತ್ತದೆ. ಹೊಟ್ಟೆಯ ಬಲಭಾಗದ ಎದೆಗೂಡಿನ ಕೆಳಗೆ ಲೀವರ ಇರುತ್ತದೆ.
ಸಾಮಾನ್ಯವಾಗಿ ಅಭಿವೃದ್ರದಿಶೀಲ ರಾಷ್ಟ್ರಗಳಲ್ಲಿ ಎ, ಬಿ, ಸಿ, ಡಿ ಮತ್ತು ಇ ಸೋಂಕುಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಕಾಮಾಲೆಗೆ ಮುಖ್ಯ ಕಾರಣವಾಗಿವೆ. ಹೆಪಟೈಟಿಸ್ ಎ ಮತ್ತು ಇ ವೈರಸ್ಗಳು ಕಲುಷಿತ ಆಹಾರ ಮತ್ತು ನೀರಿನ ಮೂಲಕ ಹರಡುತ್ತವೆ. ತಲೆನೋವು, ಮಾಂಸಖಂಡಗಳ ನೋವು, ಕೀಲುನೋವು, ವಾಕರಿಕೆ ಕಾಣಿಸಿಕೊಂಡು ಎರಡು ವಾರಗಳವರೆಗೆ ಕಾಮಾಲೆ ಉತ್ಪತ್ತಿಯಾಗುತ್ತದೆ. ವಾಂತಿ ಹಾಗೂ ಹೊಟ್ಟೆಯಲ್ಲಿ ಸಮಸ್ಯೆ ಕಂಡುಬರುತ್ತದೆ. ಆದರೆ ಸೂಕ್ತ ಚಿಕಿತ್ಸೆಯಿಂದ ಈ ಕಾಮಾಲೆಯನ್ನು ಗುಣಮುಖಗೊಳಿಸಬಹುದು. ಆದರೆ ಹೆಪಾಟೈಟಿಸ್ ಬಿ ಸೋಂಕು ದೀರ್ಘಕಾಲಿಕವಾಗಿದ್ದು, ಸಿರೊಸಿಸ್ ಹಾಗೂ ಕ್ಯಾನ್ಸರಗೆ ಮಾರ್ಪಟ್ಟು ಪ್ರಾಣಕ್ಕೆ ಕುತ್ತು ಬರಬಹುದು ಎಂದು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹಿರಿಯ ಗ್ಯಾಸ್ಟ್ರೋಎಂಟ್ರಾಲಾಜಿಸ್ಟ ಡಾ. ಸಂತೋಷ ಹಜಾರೆ ಅವರು ಎಚ್ಚರಿಸುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದಂತೆ ವಿಶ್ವದಲ್ಲಿ ಸುಮಾರು 254 ಮಿಲಿಯನ್ ಜನರು ಹೆಪಾಟೈಟಿಸ್ ಬಿ ಸೋಂಕಿನಿಂದ ಬಳಲುತ್ತಿದ್ದು, ಪ್ರತಿವರ್ಷ ಸುಮಾರು 1.5 ಮಿಲಿಯನ್ ರೋಗಿಗಳು ಕಂಡುಬರುತ್ತಿದ್ದಾರೆ. 2022ರಲ್ಲಿ ಸುಮಾರು 101 ಮಿಲಿಯನಗಿಂತ ಹೆಚ್ಚು ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ ಮುಖ್ಯವಾಗಿ ಲೀವರ ಕ್ಯಾನ್ಸರಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಹೆಪಾಟೈಟಿಸ ಬಿ ಸೋಂಕು ಹರಡುವಿಕೆ ಅಧಿಕವಾಗಿದ್ದು, ಸುಮಾರು 40 ಮಿಲಿಯನಗೂ ಅಧಿಕ ಜನರು ಇದರಿಂದ ಬಳಲುತ್ತಿದ್ದರೆ, 2022ರಲ್ಲಿ 1 ಲಕ್ಷಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.
ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಸೋಂಕುಗಳು ಅತ್ಯಧಿಕವಾಗಿ ರಕ್ತದಿಂದ ಹರಡುವ ಸೋಂಕುಗಳಾಗಿದ್ದು, ಸೋಂಕಿತ ರಕ್ತ, ಲೈಂಗಿಕ ಕ್ರಿಯೆ, ಹೆರಿಗೆಯ ಸಂದರ್ಭದಲ್ಲಿ ತಾಯಿಯಿಂದ ಮಗುವಿಗೆ ಹೀಗೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಹೆಪಟೈಟಿಸ್ ಹಾಗೂ ಸಿರೋಸಿಸ್ ಲೀವರ ವೈಫಲ್ಯಕ್ಕೆ ಕಾರಣ. ಒಮ್ಮೆ ಸೋಂಕಿಗೊಳಗಾದ ವ್ಯಕ್ತಿಯು ನಿರಂತರವಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಆದರೆ ಗುಣಮುಖ ಅಸಾಧ್ಯ. ಹೆಪಟೈಟಿಸ್ ಬಿ ಯನ್ನು ಲಸಿಕೆಯಿಂದ ಸಂಪೂರ್ಣವಾಗಿ ತಡೆಗಟ್ಟಬಹುದು. ಪ್ರಾರಂಭಿಕ ಹಂತದಲ್ಲಿ ಹೆಪಟೈಟಿಸ್ ಸಿ ವೈರಸ್ ಸೋಂಕುಗಳನ್ನು ಕಂಡು ಹಿಡಿದರೆ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸೆಯಿಂದ ಗುಣಪಡಿಸಬಹುದು. ಬೆಳಗಾವಿ ವಿಭಾಗದ ನಾಲ್ಕು ಜಿಲ್ಲೆಗಳ ಸುಮಾರು 50000 ಕ್ಕೂ ಅಧಿಕ ಜನರನ್ನು ತಪಾಸಣೆಗೊಳ್ಪಡಿಸಿದಾಗ ಶೇ. 7ರಷ್ಟು ಹೆಪಾಟೈಟಿಸ್ ಬಿ ಹಾಗೂ ಶೇ. 2ರಷ್ಟು ಹೆಪಾಟೈಟಿಸ್ ಸಿ ಸೋಂಕಿನಿಂದ ಬಳಲುತ್ತಿರುವವರು ಕಂಡುಬಂದಿದ್ದಾರೆ.
ಒಂದು ವರ್ಷದಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ತಪಾಸಣೆಗೊಳ್ಪಟ್ಟ ಮಧುಮೇಹಿಗಳಲ್ಲಿ ಶೇ. 40 ರೋಗಿಗಳಲ್ಲಿ ಕೊಬ್ಬಿನ ಪಿತ್ತಜನಕಾಂಗದ ಖಾಯಿಲೆಯ ಲಕ್ಷಣಗಳು ಕಂಡುಬಂದಿದ್ದರೆ, ಶೇ. 20ರಷ್ಟು ಜನರಲ್ಲಿ ಗಂಭೀರವಾದ ಸ್ಥಿತಿಯನ್ನು ತಂದೊಡ್ಡಿದೆ. ಶೇ.20 ರಷ್ಟು ಯುವಕರು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿರುವದು ಆತಂಕಕಾರಿ. ಆದ್ದರಿಂದ ಯುವ ಪೀಳಿಗೆಯ ಜೀವನಶೈಲಿಯ ಬದಲಾವಣೆಯಅತ್ಯವಶ್ಯವಿದೆ.
ಕಾಮಾಲೆಯ ಸಾಂಪ್ರದಾಯಿಕ ಚಿಕಿತ್ಸೆ – ಸಮುದಾಯದಲ್ಲಿ ಯಕೃತ್ತಿನ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯದೇ ಪರ್ಯಾಯ ಚಿಕಿತ್ಸೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ವೈದ್ಯರು ಸಾಂಪ್ರದಾಯಿಕ ಗಿಡಮೂಲಿಕೆಗಳ ಔಷಧಿಗಳ ಮೋರೆ ಹೋಗುತ್ತಿರುವದರಿಂದ ಅಪಾಯ ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದ ಚಿಕಿತ್ಸೆಯಲ್ಲಿ ವಿಳಂಭವಾಗಿ ಖಾಯಿಲೆ ಉಲ್ಭಣಗೊಂಡು ಸಾವು ಸಂಭವಿಸಬಹುದು. ಜಾಗೃತಿ ಮೂಡಿಸುವ ಮೂಲಕ ಸಾಕ್ಷಾಧಾರಿತ ಚಿಕಿತ್ಸೆಯನ್ನು ನೀಡುತ್ತ ಅವೈಜ್ಞಾನಿಕ ಚಿಕಿತ್ಸೆಗಳ ವಿರುದ್ದ ಜಾಗೃತಿ ಮೂಡಿಸಿ, ಸಮುದಾಯದಲ್ಲಿ ಆಳವಾಗಿ ಬೇರೂರಿರುವ ನಂಬಿಕೆಯನ್ನು ಅಳಿಸಬೇಕಿದೆ.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ್ ಕೋರೆ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗವು ಯಕೃತ್ತಿನ ಆರೈಕೆಯಲ್ಲಿ ಅತ್ಯುತ್ತಮ ಸ್ಥಾನ ಪಡೆದಿದೆ. ಎಲ್ಲಾ ರೀತಿಯ ಯಕೃತ್ತಿನ ಕಾಯಿಲೆಗಳಿಗೆ ಸಮಗ್ರವಾದ ಚಿಕಿತ್ಸೆ ನೀಡಲು ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಅಳವಡಿಸಿಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 18 ರೋಗಿಗಳಿಗೆ ಲೀವರ ಕಸಿ ಮಾಡಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದೆ.
ಮುಂಜಾಗ್ರತಾ ಕ್ರಮಗಳು

  • ವಯಕ್ತಿಕ, ಮನೆಯ ಹಾಗೂ ಸಾಮಾಜಿಕ ಸ್ವಚ್ಛತೆಗಳು ರೋಗ ಹರಡುವಿಕೆಯನ್ನು ತಡೆಗಟ್ಟಲು ಮಹತ್ವದ ಪಾತ್ರ ವಹಿಸುತ್ತವೆ.
  • ಶರೀರದ ಅತಿಯಾದ ತೂಕವನ್ನು ಕಡಿಮೆ ಮಾಡಬೇಕು. ಸಮತೋಲನ ಆಹಾರ ಸೇವಿಸಬೇಕು.
  • ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ವ್ಯಾಯಾಮಗಳನ್ನು ಮಾಡಬೇಕು.
  • ಕೀಟನಾಶಕ, ರಾಸಾಯನಿಕ ಇತ್ಯಾದಿಗಳಿಂದ ದೂರವಿರಬೇಕು.
  • ಮದ್ಯಪಾನ, ಧೂಮ್ರಪಾನ, ಗುಟಕಾ, ಗಾಂಜಾ ಮುಂತಾದ ದುಶ್ಚಟಗಳನ್ನು ತ್ಯಜಿಸಬೇಕು.
  • ಅಸ್ವಚ್ಛತೆಯಿಂದ ಕೂಡಿದ ಸೂಜಿಗಳನ್ನು ಬಳಸಬಾರದು.
  • ಬೇರೆಯವರ ರಕ್ತವು ನಿಮ್ಮ ರಕ್ತವನ್ನು ಸಂಪರ್ಕಿಸಿದಾಗ ಕೂಡಲೇ ವೈದ್ಯರನ್ನು ಭೇಟಿಯಾಗಿರಿ.
  • ಟೂಥಬ್ರಷ್, ರೇಜರ್ ಇತ್ಯಾದಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು.
  • ಸುರಕ್ಷಿತ ಲೈಂಗಿಕತೆ ಹೊಂದಬೇಕು. ಮಲ-ಮೂತ್ರ ವಿಸರ್ಜನೆ ಮಾಡಿದಾಗ ಹಾಗೂ ಆಹಾರ ಸೇವಿಸುವ ಮೊದಲು ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳಬೇಕು. ಅತಿಯಾಗಿ ಔಷಧಿಗಳನ್ನು ಸೇವಿಸಬಾರದು. ಹೆಪಟೈಟಿಸ್ ‘ಬಿ’ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. “ಆಹಾರವೇ ಔಷಧವಾಗಿದ್ದು, ಲೀವರ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.

ಬಸವರಾಜ ಸೊಂಟನವರ ಹವ್ಯಾಸಿ ಬರಹಗಾರರು, ಜನಸಂಪರ್ಕ ಅಧಿಕಾರಿಗಳು