ಬೆಳಗಾವಿ,:ಬೆಳಗಾವಿಯ ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ ಆ್ಯಂಡ ರಿಸರ್ಚ (ಕೆಎಲ್ಇ ಡೀಮ್ಡ ಯುನಿವರ್ಸಿಟಿ) ನ 15ನೇ ಘಟಿಕೋತ್ಸವವು ಇದೇ ದಿ. 3 ಜೂನ್ 2025 ರಂದು ಬೆಳಗ್ಗೆ 9.30ಕ್ಕೆ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಕೆಎಲ್ಇ ಶತಮಾನೋತ್ಸವ ಕನ್ವೆನ್ಷನ್ ಸೆಂಟರನಲ್ಲಿ ಜರುಗಲಿದೆ.
ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ ಕಾಹೆರನ ಕುಲಾಧಿಪತಿ ಹಾಗೂ ಕೆಎಲ್ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಸಾಯನಿಕ ಮತ್ತು ಗೊಬ್ಬರ ಸಚಿವರಾದ ಶ್ರೀ ಜಗತ ಪ್ರತಾಪ ನಡ್ಡಾ ಮುಖ್ಯ ಅತಿಥಿಗಳಾಗಿ ಆಗಮಿಸಿ, ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರೀಕ ಪೂರೈಕೆ, ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಹ್ಲಾದ ಜೋಷಿ ಅವರು ಗೌರವ ಅತಿಥಗಳಾಗಿ ಆಗಮಿಸಲಿದ್ದಾರೆ.
ಘಟಿಕೋತ್ಸವದ ಅಧ್ಯಕ್ಷತೆಯನ್ನು ಕಾಹೆರನ ಕುಲಾಧಿಪತಿಗಳಾದ ಡಾ. ಪ್ರಭಾಕರ ಕೋರೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಂಬೈನ ಟಾಟಾ ಮೆಮೊರಿಯಲ್ ಕೇಂದ್ರದ ಡೆಪ್ಯೂಟಿ ಡೈರೆಕ್ಟರ ಡಾ. ಶೈಲೇಶ ವಿ ಶ್ರೀಖಂಡೆ ಅವರಿಗೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಡಾಕ್ಟರ ಆಫ್ ಸೈನ್ಸ್ ನೀಡಿ ಗೌರವಿಸಲಿದೆ. ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತಿ ಪಡೆದ ಅವರು, ಆಸ್ಪತ್ರೆಯನ್ನು ಕ್ಯಾನ್ಸರ ಆರೈಕೆ ಹಾಗೂ ಸಂಶೋಧನೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವಲ್ಲಿ ಹಾಗೂ ಲೀವರ ಕ್ಯಾನ್ಸರ ಶಸ್ತ್ರಚಿಕಿತ್ಸೆ, ಸಂಶೋಧನೆ, ವೈದ್ಯಕೀಯ ಸಾಮಗ್ರಿಗಳ ತಂತ್ರಜ್ಞಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇಲ್ಲಿಯರೆಗೆ 600 ಕ್ಕೂ ಅಧಿಕ ಉಪನ್ಯಾಸಗಳನ್ನು ನೀಡಿದ್ದಾರೆ.
ಆರೋಗ್ಯ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮುಗಿಸಿದ 1844 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. 40 ಪಿಹೆಚ್ಡಿ, 29 ಪೋಸ್ಟ ಡಾಕ್ಡರಲ್ ಪದವಿ, 660 ಸ್ನಾತಕೋತ್ತರ ಪದವಿ, 1080 ಪದವಿ, 9 ಪಿಜಿ ಡಿಪ್ಲೊಮಾ, 11 ಡಿಪ್ಲೊಮಾ, 4 ಫೆಲೋಶಿಪ್ ಹಾಗೂ 11 ಸರ್ಟಿಫಿಕೇಟ್ ಕೋರ್ಸ್ ಪದವಿ ಪ್ರದಾನ ಮಾಡಲಾಗುತ್ತದೆ.
35 ವಿದ್ಯಾರ್ಥಿಗಳು 46 ಸ್ವರ್ಣ ಪದಕ ಪಡೆದಿದ್ದು, ಅದರಲ್ಲಿ 28 ವಿದ್ಯಾರ್ಥಿನಿಯರು, 7 ವಿದ್ಯಾರ್ಥಿಗಳು ಇದ್ದಾರೆ. ಕೆಎಲ್ಇ ಬಿ ಎಂ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿನಿ ಡಾ. ಶ್ವೇತಾ ರಾಜಶೇಖರ ಗೋರೆ ಅವರು ಆಯುರ್ವೇದ ಪದವಿದಲ್ಲಿ 4 ಸ್ವರ್ಣ ಪದಕ ಹಾಗೂ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಡಾ. ಕರಮುಡಿ ಪ್ರತ್ಯುಷಾ ಅವರು ವೈದ್ಯಕೀಯ ಸ್ನಾತಕೋತ್ತರದಲ್ಲಿ 3 ಸ್ವರ್ಣ ಪದಕ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಅತ್ಯಧಿಕ ಸ್ವರ್ಣ ಪದಕ ಪಡೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪಕುಲಪತಿ ಡಾ. ನಿತಿನ ಗಂಗಾಣೆ, ಕುಲಸಚಿವ ಡಾ. ಎಂ ಎಸ್ ಗಣಾಚಾರಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕೆಎಲ್ಇ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ
