ಬೆಳಗಾವಿ,: ಬೆಂಗಳೂರು ಮತ್ತು ಬೆಳಗಾವಿ ಮದ್ಯೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗೆ ಅನುಮೋದನೆ ನೀಡಲಾಗಿದ್ದು, ಸದ್ಯ ಬೆಂಗಳೂರು-ಧಾರವಾಡ ನಡುವೆ ಸಂಚರಿಸುತ್ತಿರುವ ವಂದೇ ಭಾರತ ರೈಲನ್ನು ವಿಸ್ತರಣೆ ಮಾಡದೇ, ಸಂಪೂರ್ಣವಾಗಿ ಹೊಸ ರೈಲನ್ನು ಸಂಚರಿಸಲಾಗುತ್ತದೆ. ಅದಕ್ಕಾಗಿ ನೈರುತ್ಯ ರೇಲ್ವೆ ಸಿದ್ದತೆ ಮಾಡಿಕೊಳ್ಳುತ್ತಿದೆ.
ಹಿರಿಯ ರೇಲ್ವೆ ಅಧಿಕಾರಿಗಳ ಪ್ರಕಾರ ಹೊಸ ರೈಲು ಬೆಳಿಗ್ಗೆ5.30 ಬೆಳಗಾವಿಯಿಂದ ಸಂಚಾರ ಆರಂಭಿಸಿ, ಮಧ್ಯಾಹ್ನ 12.30ಕ್ಕೆ ಕೆಎಸ್‌ಆರ್ ಬೆಂಗಳೂರ ಅನ್ನು ತಲುಪಲಿದೆ. ಬೆಂಗಳೂರಿನಿಂದ ಮರಳಿ ಮಧ್ಯಾಹ್ನ 1.30ಕ್ಕೆ ಸಂಚಾರ ಆರಂಭಿಸುವ ರೈಲು ರಾತ್ರಿ 9.30ಕ್ಕೆ ಬೆಳಗಾವಿ ತಲುಪಬಹುದು. ಶೀಘ್ರದಲ್ಲಿಯೇ ದಿನಾಂಕ ಮತ್ತು ವೇಳೆ ನಿಗದಿಯಾಗಿ ಸಂಚಾರ ಆರಂಭವಾಗಲಿದೆ. ಪ್ರಾರಂಭಿಕವಾಗಿ ಎಂಟು ಬೋಗಿಗಳನ್ನು ರೈಲು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬೋಗಿಗಳನ್ನು ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ರೈಲಿನ ಪ್ರಾಥಮಿಕ ನಿರ್ವಹಣೆಯನ್ನು ಬೆಳಗಾವಿಯಲ್ಲಿಯೇ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
21 ನವೆಂಬರ್ 2023 ರಂದು ಪ್ರಾಯೋಗಿಕ ಸಂಚಾರವನ್ನು ನಡೆಸಿ ಒಂದೂವರೆ ವರ್ಷದ ನಂತರ ರೇಲ್ವೆ ಅಧಿಕಾರಿಗಳು ವಂದೆ ಭಾರತ ರೈಲು ಸಂಚಾರಕ್ಕೆ ಕಾರ್ಯಪ್ರವೃತ್ತರಾಗಿದ್ದಾರೆ. ಬೆಂಗಳೂರಿನಿಂದ ಬೆಳಗಾವಿ 610.6 ಕಿ.ಮೀ. ದೂರವಿದ್ದು, ಸುಮಾರು 7 ಗಂಟೆ 55 ನಿಮಿಷಗಳಲ್ಲಿ ನಿಗಧಿತ ದೂರವನ್ನು ಕ್ರಮಿಸಲಿದೆ. ಈ ಮಾರ್ಗದಲ್ಲಿ ಪ್ರಸ್ತುತ ಸಂಚರಿಸುವ ರೈಲಿನ ಅವಧಿಗಿಂತ ಎರಡು ಗಂಟೆ ಮುಂಚಿತವಾಗಿ ತಲುಪಲಿದೆ.
ಲೋಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ತುಮಕೂರು ಮತ್ತು ಯಶವಂತಪುರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗುವ ನಿರೀಕ್ಷೆಯಿದೆ.
ಸಂಸದ ಜಗದೀಶ್‌ ಶೆಟ್ಟರ ಅವರ ”ಸತತ ಮನವಿಗೆ ಸ್ಪಂದಿಸುವ ಮೂಲಕ ಸಚಿವ ಅಶ್ವಿನಿ ವೈಷ್ಣವ್‌ ಅವರು ಹೊಸದಾಗಿ ವಂದೇ ಭಾರತ್‌ ರೈಲು ಸಂಚಾರಕ್ಕೆ ಅನುಮೋದನೆ ನೀಡಿದ್ದಾರೆ. ನಾವು ಕೋರಿದಂತೆ ಬೆಳಗ್ಗೆಯ ಅವಧಿಯಲ್ಲೇ ರೈಲು ಬೆಳಗಾವಿಯಿಂದ ಹೊರಡಲಿದ್ದು, ಮತ್ತೆ ರಾತ್ರಿ ವಾಪಸ್ಸಾಗಲಿದೆ. ಆದಷ್ಟು ಬೇಗ ಸಮಯ ನಿಗದಿಯಾಗಲಿದೆ ಎಂದು ಹೇಳಿದ್ದಾರೆ.

ನೂತನ ವಂದೇ ಭಾರತ ಎಕ್ಸಪ್ರೆಸ್ ರೈಲು ಸೇವೆಯನ್ನು ಬೆಳಗಾವಿಯಿಂದ ಪ್ರಾರಂಭಿಸುವ ವಿಷಯವಾಗಿ ಅಗತ್ಯ ಅನುಮೋದನೆ ನೀಡಿರುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ, ಕೇಂದ್ರ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ರೇಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಸಂಸದರಾದ ಜಗದೀಶ ಶೆಟ್ಟರ ಅವರು ಅಭಿನಂದಿಸಿದ್ದಾರೆ.
ಅಲ್ಲದೇ ಅದಷ್ಟು ಬೇಗನೆ ದಿನಾಂಕ ನಿಗದಿಗೊಳಿಸಿ ಈ ಸೇವೆಯನ್ನು ಪ್ರಾರಂಭಿಸುವಂತೆ ಕೋರಿದ್ದಾರೆ.

ಹೊಸ ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲು ಅನುಮೋದಿತವಾಗಿರುವದಕ್ಕೆ ಸಂತೋಷವಿದೆ ಎಂದು ಸಚಿವ ಪ್ರಹಲ್ದಾದ ಜೋಷಿ ಅವರು ಸಾಮಾಜಿಕ ಮಾದ್ಯಮದ ಮೂಲಕ ತಿಳಿಸಿದ್ದಾರೆ.