ಬೆಳಗಾವಿ: ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಮತ್ತೆ ಮುನ್ನಲೆಗೆ ಬಂದಿದೆ. ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲೆ ವಿಭಜನೆಯನ್ನು ಮಾಡುವದಾಗಿ ಲೋಕೋಪಯೋಗಿ  ಸಚಿವ ಸತೀಶ್ ಜಾರಕಿಹೊಳಿ ಅವರಿಂದಿಲ್ಲಿ ಹೇಳಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ದೊಡ್ಡದಾದ ಜಿಲ್ಲೆಯಾಗಿರುವದರಿಂದ ಆಡಳಿತಾತ್ಮಕವಾಗಿ ತೊಂದರೆಯಾಗುತ್ತಿದೆ. ಆದ್ದರಿಂದ ಜಿಲ್ಲೆ ವಿಭಜನೆ ಆಗಲೇಬೇಕು, ಅದು ಅನಿವಾರ್ಯ ಅದರಲ್ಲಿ ಪ್ರಶ್ನೆ ಇಲ್ಲ. ಬಹಳ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ನಡೆಸುವುದು ಅಷ್ಟು ಸುಲಭ ಅಲ್ಲ. ಜಿಲ್ಲಾ ವಿಭಜನೆ ಬಗ್ಗೆ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇವೆ. ಒತ್ತಡವೂ ಮಾಡುತ್ತೇವೆ ಎಂದರು.

ಜಿಲ್ಲೆ ವಿಭಜನೆಯಾದರೂ ಮೂರು ಜಿಲ್ಲೆ ಒಳಗೆ ಎಂಟ್ರಿ ಇದೆ. ಗೋಕಾಕ್ ಆದರೂ, ಚಿಕ್ಕೋಡಿ ಆದರೂ ಮೂರು ಜಿಲ್ಲೆಯಾದರೂ ನಂದು ಎಂಟ್ರಿ ಇದೆ. ಜಿಲ್ಲಾ ವಿಭಜನೆ ಬೇಡಲು ಎಲ್ಲರಿಗೂ ಹಕ್ಕಿದೆ ಬೇಡಲಿ ಎಂದರು. ಸಭೆಗೆ ಬಿಜೆಪಿ ಶಾಸಕರ ಗೈರು ವಿಚಾರವಾಗಿ ಮಾತನಾಡಿದ ಅವರು, ಎನಾದರೂ ಕೆಲಸ ಇದ್ದಿರಬೇಕು ಅದಕ್ಕೆ ಬಂದಿಲ್ಲ. ಅವರ ಪರವಾಗಿ ನಾನು ಚರ್ಚೆ ಮಾಡುತ್ತೇನೆ ಎಂದರು.

ಗ್ಯಾರಂಟಿಗೆ ಷರತ್ತು :

ಗೃಹಲಕ್ಷ್ಮೀ ಯೋಜನೆಯಡಿ ಯಜಮಾನಿಗೆ 2 ಸಾವಿರ ರೂ. ನೀಡಬೇಕು. ಅದನ್ನು ಯಾರು ತೆಗೆದುಕೊಳ್ಳಬೇಕೆಂದು ಷರತ್ತು ಹಾಕಬೇಕು ಅಲ್ವಾ? ಅತ್ತೆ ಸೊಸೆಗೆ ಕೊಡಿ ಅಂತಾ ಹೇಳಿದರೂ ಷರತ್ತು ಆಗುತ್ತದೆ. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮೊದಲು ಅತ್ತೆಗೆ ಕೊಡುವುದು. ಅತ್ತೆ ಪ್ರೀತಿಯಿಂದ ಸೊಸೆಗೆ ಕೊಡುವುದಾದರೆ ಅದನ್ನು ಬರೆಯಬೇಕಾಗುತ್ತದೆ ಎಂದರು.

ಪಠ್ಯಕ್ರಮ ಬದಲಾವಣೆ:

ಪಠ್ಯಕ್ರಮದಲ್ಲಿ ಕೆಲವೊಂದನ್ನು ಅನಾವಶ್ಯಕವಾಗಿ ಸೇರಿಸಲಾಗಿದ್ದನ್ನು ಅದನ್ನು ತೆಗೆದುಹಾಕಲಾಗುತ್ತದೆ. ಪಠ್ಯದಿಂದ ಯಾವುದನ್ನು ತೆಗೆಯಬೇಕೆಂದು ಚರ್ಚಿಸುತ್ತೇವೆ. ನಾವು ಎನ್‌ಇಪಿ ಪರವಾಗಿಲ್ಲ, ಅದರ ವಿರುದ್ಧ ಇದ್ದೇವೆ. ತಜ್ಞರ ವರದಿ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.