ಬೆಳಗಾವಿ: ಇವತ್ತು ರಾತ್ರಿ ಎಷ್ಟೇ ಸಮಯವಾದರೂ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮೃತಹದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸುತ್ತೇವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಪಷ್ಟಪಡಿಸಿದರು.
ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತದಲ್ಲಿ ಮೃತರಾದ
ಮಹಾದೇವಿ ಬಾವನೂರ(48) ಹಾಗೂ ಶೆಟ್ಟಿ ಗಲ್ಲಿಯ ಅರುಣ ಕೋಪರ್ಡೆ(61) ಅವರ ಮೃತದೇಹಗಳನ್ನು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡು ಅವರು ಮಾತನಾಡಿದರು.
ಅರುಣ ಕೋಪರ್ಡೆ ಹಾಗೂ ಮಹಾದೇವಿ ಬಾವನೂರ ಅವರ ಮೃತದೇಹಗಳನ್ನು ನಾವು ಬರಮಾಡಿಕೊಂಡಿದ್ದೇವೆ. ಇನ್ನೂ ಇಬ್ಬರ ಮೃತದೇಹಗಳನ್ನು ಕಳಿಸಿಕೊಡುವ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ವಿಮಾನದಲ್ಲಿ ದೆಹಲಿಯಿಂದ ಗೋವಾಗೆ ಸುಮಾರು 8.30ಕ್ಕೆ ಬರಲಿವೆ. ಅಲ್ಲಿ ಆ ಮೃತದೇಹಗಳನ್ನು ಸ್ವೀಕರಿಸಿ, ಬಳಿಕ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಳಗಾವಿಯಲ್ಲಿ ನಾವು ಬರಮಾಡಿಕೊಳ್ಳಲು ಎಲ್ಲ ರೀತಿ ಸಿದ್ಧತೆ ಕೈಗೊಂಡಿದ್ದೇವೆ ಎಂದರು.
ಪ್ರಯಾಗ್ ರಾಜ್ ನಲ್ಲಿ ದುರಾದೃಷ್ಟವಶಾತ್ ಮರಣೋತ್ತರ ಪರೀಕ್ಷೆ ಆಗಿಲ್ಲ. ಇನ್ನು ದೆಹಲಿಯಲ್ಲೂ ಪರೀಕ್ಷೆಗೆ ಪ್ರಯತ್ನಿಸಿದ್ದೇವು. ಆದರೆ, ವಿಮಾನ ವಿಳಂಬ ಆಗುವ ಹಿನ್ನೆಲೆಯಲ್ಲಿ ಅಲ್ಲಿಯೂ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ, ಮೊದಲು ಮೃತದೇಹಗಳನ್ನು ನಮ್ಮ ಜಿಲ್ಲೆಗೆ ತರಿಸಿಕೊಳ್ಳುವ ಉದ್ದೇಶದಿಂದ ಇಲ್ಲಿಯೇ ಮಾಡಲು ನಿರ್ಧರಿಸಿದೇವು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸುತ್ತೇವೆ ಎಂದರು.
ಉತ್ತರಪ್ರದೇಶ ಸರ್ಕಾರ ಆಂಬುಲೇನ್ಸ್ ವ್ಯವಸ್ಥೆಯನ್ನೂ ಮಾಡದ ವಿಚಾರಕ್ಕೆ ಪ್ರಯಾಗ್ ರಾಜ್ ಜಿಲ್ಲಾಡಳಿತಕ್ಕೆ ಬಹಳ ಒತ್ತಡ ಇರಬಹುದು. ಆದರಿಂದ ಈ ರೀತಿ ಸಂದರ್ಭ ಸೃಷ್ಟಿ ಆಗಿರಬಹುದು. ಹಾಗಾಗಿ, ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು.
