ಬೆಳಗಾವಿ,: ನಗರದ (ಎಲಸಿ ನಂ: 381)ಟಿಳಕವಾಡಿ ಗೇಟ್ ನಂ:3ರ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಎರಡನೆಯ ಲೇನ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸುವಂತೆ ಸಂಸದ ಜಗದೀಶ ಶೆಟ್ಟರ ಅವರಿಂದಿಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ರೇಲ್ವೆ ಹಾಗೂ ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರರೊಡನೆ ಚರ್ಚಿಸಿ, ಸಧ್ಯ ಇರುವ ಲೋಪದೋಷಗಳನ್ನು ಸರಿ ಪಡಿಸಿ ಸಾರ್ವಜನಿಕರ ಹಿತಾದೃಷ್ಟಿಯಿಂದ ಮತ್ತು ವಾಹನ ಸಂಚಾರಕ್ಕೆ ಅನಕೂಲವಾಗಲು ಕಾಮಗಾರಿ ಹಾಗೂ ಕಂದಕಗಳನ್ನು ಮುಚ್ಚಿ ರಸ್ತೆ ದುರಸ್ತಿ ಕಾರ್ಯ ಕೂಡಲೆ ಪ್ರಾರಂಭಿಸುವಂತೆ ಸೂಚಿಸಿದರು.
ರೇಲ್ವೆ ಇಲಾಖೆಯ ಎಲ್ ಸಿ ನಂ: 382 (ಟಿಳಕವಾಡಿ ಗೇಟ ನಂ:2) ಮತ್ತು 383 ( ಟಿಳಕವಾಡಿ ಗೇಟ್ ನಂ: 1 ) ಹತ್ತಿರ ನೂತನವಾಗಿ ನಿರ್ಮಾಣವಾಗ ಬೇಕಾದ ರಸ್ತೆ ಮೇಲು ಸೇತುವೆ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಕೊಳ್ಳಬೇಕು. ಇದಕ್ಕೆ ಪಾಲಿಕೆ ಸಹಕರಿಸಬೇಕು ಎಂದು ಸೂಚನೆ ನೀಡಿದರು.
ನಗರದ ತಾನಾಜಿ ಗಲ್ಲಿಯ ಎಲ್ ಸಿ ನಂ: 386 ಮೇಲ್ಸೇತುವೆ” ನಿರ್ಮಿಸಬೇಕಾದರೆ ಇಲ್ಲಿನ ನಿವಾಸಿಗಳ ಅಭಿಪ್ರಾಯ ಪಡೆದು ಸಾರ್ವಜನಿಕರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಕೊಳ್ಳಲಾಗುವದೆಂದು ತಿಳಿಸಿದರು.
ಶಾಸಕರಾದ ಅಭಯ ಪಾಟೀಲ, ಮಹಾಪೌರ ಸವಿತಾ ಕಾಂಬಳೆ, ಆನಂದ ಚೌಹಾಣ್, ಮಾಜಿ ಶಾಸಕ ಅನೀಲ ಬೆನಕೆ, ನಗರ ಸೇವಕರಾದ ವಾಣಿ ಜೋಶಿ, ರಾಜು ಭಾತಖಂಡೆ ವಿನೋದ ಭಾಗವತ್, ರೇಲ್ವೆ, ಲೋಕೋಪಯೋಗಿ ಮತ್ತು ಮಹಾನಗರ ಪಾಲಿಕೆಯ ಅಭಿಯಂತರರು ಉಪಸ್ಥಿತರಿದ್ದರು.