ಬೆಳಗಾವಿ: ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿಯ ಚಿಕ್ಕೋಡಿ ತಾಲೂಕು ಜೈನಾಪುರ ಗ್ರಾಮದ ಬಳಿ ಉದ್ಯಮಿಯೊಬ್ಬರ ಸುಟ್ಟ ಶವ ಕಾರಿನಲ್ಲಿ ಪತ್ತೆಯಾಗಿದೆ. ಚಿಕ್ಕೋಡಿಯ ಗ್ರಾನೈಟ್ ಉದ್ಯಮಿಯಾಗಿರುವ, ಫೈರೋಜ್ ಬಡಗಾವಿ (40) ಅವರ ಶವ ಬುಧವಾರದಂದು ಸಂಪೂರ್ಣ ಭಸ್ಮವಾದ ಸ್ಥಿತಿಯಲ್ಲಿ ಕಾರಿನಲ್ಲಿ ಪತ್ತೆಯಾಗಿದೆ. ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಚಾಲಕನ ಸೀಟಿನಲ್ಲಿ ಫೈರೋಜ್ ಬೆಂದು ಹೋಗಿದ್ದಾರೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಬುಧವಾರ ಮಧ್ಯಾಹ್ನ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿದ್ದು, ಮೃತ ವ್ಯಕ್ತಿಯ ಕುಟುಂಬದವರು ನೀಡಿರುವ ದೂರ ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.