“ಸುದ್ದಿ ಗೊತ್ತಾಯ್ತೆನ್ರಿ? ಪಕ್ಕದ ಮನೆ ಪಂಕಜಮ್ಮ ನೆನ್ನೆ ನೇಣು ಹಾಕ್ಕೊಳೋಕೆ ಹೋಗಿದ್ಳಂತೆ?”…. “ಪೊಲೀಸ್ ಗಿಲೀಸ್ ಅಂತ ಸುಮ್ನೆ ಉಪದ್ರವ, ಆತ್ಮಹತ್ಯೆ ಅಂತ ಯಾರಿಗೂ ಹೇಳ್ಬೇಡಿ, ಹಾರ್ಟ್ ಅಟ್ಯಾಕ್ ಅಂತಾನೇ ಹೇಳಿ”… ” ಅಯ್ಯೋ ಬೊಗಳೋ ನಾಯಿ ಕಚ್ಚೋದಿಲ್ಲ. ನಾ ಸಾಯ್ತೀನಿ ಸಾಯ್ತೀನಿ ಅನ್ನೋರೆಂದೂ ಸಾಯಲ್ಲ ಬಿಡು”… “ಅವನು ಅಂಥಾ ಹೇಡಿ ಅನ್ಕೊಂಡಿರ್ಲಿಲ್ಲ ನಾನು, ಇಷ್ಟು ಸಣ್ಣ ವಿಷಯಕ್ಕೆ ವಿಷ ಕುಡಿಯೋದಾ?”… ” ಈ ಡಿಪ್ರೆಶನ್, ಸ್ಟ್ರೆಸ್, ಟೆನ್ಶನ್ ಅನ್ನೋದು ಎಲ್ಲ ನಮ್ಮ ಮನಸ್ಥಿತಿ, ಬಿಟ್ಟ ಹಾಕು, ಮಜಾ ಮಾಡು”…..
ಇಂತಹ ಮಾತುಗಳನ್ನು ನಾವೆಲ್ಲರೂ ಒಂದಿಲ್ಲ ಒಂದು ಸಂದರ್ಭದಲ್ಲಿ ಕೇಳಿರ್ತೀವಿ, ಅಥವಾ ನುಡಿದಿರ್ತೀವಿ. ಈ ಸಂಭಾಷಣೆಗಳನ್ನು ಗಮನಿಸಿದಾಗ ನಮಗೆ ಗೋಚರವಾಗುವ ಒಂದು ಅಂಶವೆಂದರೆ ಆತ್ಮಹತ್ಯೆಯ ಬಗ್ಗೆ ನಮ್ಮಲ್ಲಿ ಇರುವ ಋಣಾತ್ಮಕ ದೃಷ್ಟಿಕೋನ. ಸ್ನೇಹಿತರೆ, ಆತ್ಮಹತ್ಯೆಯ ಪಿಡುಗನ್ನು ನಾವು ನಿವಾರಿಸಬೇಕೆಂದರೆ ಮೊದಲು ನಮ್ಮ ದೃಷ್ಟಿಕೋನ ಬದಲಾಗಬೇಕು. ಹೀಗಾಗೇ ಈ ವರ್ಷದ ಆತ್ಮಹತ್ಯಾ ತಡೆ ದಿನದ(ಸೆಪ್ಟೆಂಬರ್ ೧೦) ಧೇಯವಾಕ್ಯ “change the narrative …ಬದಲಾಗಲಿ ದೃಷ್ಟಿಕೋನ”.
ಆತ್ಮಹತ್ಯೆ ಸಮಸ್ಯೆಯ ಪರಿಮಾಣವನ್ನು ನೋಡಿದಾಗ ದಿಗುಲಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಜಾಗತಿಕವಾಗಿ ಪ್ರತಿ ನಲವತ್ತು ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಬಲಿಯಾಗುತ್ತಾನೆ. ಭಾರತದಲ್ಲಿ ೨೦೧೬ರಲ್ಲಿ ಒಟ್ಟು ಆತ್ಮಹತ್ಯಾ ಪ್ರಸಂಗಗಳ ಸಂಖ್ಯೆ ೨,೩೦,೩೧೪.ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ೧೮ ಆತ್ಮಹತ್ಯೆಗಳೊಂದಿಗೆ ಭಾರತ ವಿಶ್ವದಲ್ಲಿ ಒಂಬತ್ತನೆಯ ಸ್ಥಾನದಲ್ಲಿದೆ ಎನ್ನುವದು ಕಳವಳಕಾರಿ ಅಂಶ. ಈ ಅಂಕಿ ಅಂಶಗಳು ಆತ್ಮಹತ್ಯೆಯಿಂದ ಮೃತರಾದವರದ್ದು. ಆತ್ಮಹತ್ಯೆಗೆ ಪ್ರಯತ್ನಿಸಿದವರ ಸಂಖ್ಯೆ ಇನ್ನೂ ಮೂರ್ನಾಲ್ಕು ಪಟ್ಟು ಹೆಚ್ಚು ಎಂದು ಅಂದಾಜಿಸಲಾಗಿದೆ.
ಆತ್ಮಹತ್ಯೆಯ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗಬೇಕಾದರೆ, ಆತ್ಮಹತ್ಯೆಗೆ ಕಾರಣಗಳನ್ನು ಅರಿತುಕೊಳ್ಳುವದು ಅಗತ್ಯ. ಆತ್ಮ್ಯಾಹತ್ಯೆಗೆ ಕಾರಣಗಳನ್ನು ಸ್ಥೂಲವಾಗಿ ಜೈವಿಕ (ಬಯೋಲಾಜಿಕಲ್), ಮಾನಸಿಕ (ಸೈಕಲಾಜಿಕಲ್) ಮತ್ತು ಸಾಮಾಜಿಕ (ಸೋಶಿಯಲ್) ಎಂಬುದಾಗಿ ಸ್ಥೂಲವಾಗಿ ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಜೈವಿಕ ಕಾರಣಗಳೆಂದರೆ ಒಬ್ಬ ವ್ಯಕ್ತಿಯ ವಂಶವಾಹಿನಿಗಳ ವ್ಯವಸ್ಥೆ (geneitc makeup). ಆತ್ಮಹತ್ಯಾ ಪ್ರವೃರ್ತಿಯು ಇತರೆ ರೋಗಗಳಂತೆ (ಉದಾ: ಮಧುಮೇಹ, ರಕ್ತದೊತ್ತಡ) ವಂಶಪಾರಂಪರ್ಯವಾಗಿ ಕಂಡು ಬರುತ್ತದೆ. ಆತ್ಮಹತ್ಯಾ ಪ್ರವೃರ್ತಿಯು ಸಾಮಾನ್ಯವಾಗಿ ಕಂಡುಬರುವ ಪರಿವಾರದ ಸದಸ್ಯರ ಬೆನ್ನುಹುರಿಯ ದ್ರವದಲ್ಲಿ (CSF) ಸೆರಟೋನಿನ್ ಎಂಬ ನರ-ರಾಸಾಯನಿಕದ ಉತ್ಪನ್ನವಾದ (metabolite) 5HTIAA ಎಂಬ ರಾಸಾಯನಿಕವು ಆರಯೋಗ್ಯಕರ ವ್ಯಕ್ತಿಗಳಿಗಿಂತ ಕಡಿಮೆ ಪ್ರಮಾಣದಲ್ಲಿರುವದು ಸಿದ್ಧವಾಗಿದೆ. ಸೆರೆಟೋನಿನ್ ನ ಅಭಾವವು ಖಿನ್ನತೆ ಹಾಗೂ ಅತೀ ದುಡುಕು ಸ್ವಭಾವಕ್ಕೆಪ್ರಮುಖ ಕಾರಣವಾಗಿದೆ. ಮಾನಸಿಕ ಕಾರಣಗಳು ಒಬ್ಬ ವ್ಯಕ್ತಿಯ ಮಾನಸಿಕ ಹಂದರಕ್ಕೆ ಸಂಬಂಧಪಟ್ಟವು. ನಕಾರಾತ್ಮಕ ಮನಸ್ಥಿತಿ, ದುಡುಕುವಿಕೆಯ ಮನಸ್ಥಿತಿ, ಆತ್ಮಸ್ಥೈರ್ಯದ ಕೊರತೆಗಳಂತಹ ಸಾಮಾನ್ಯ ದೋಷಗಳಲ್ಲದೇ, ಖಿನ್ನತೆಯ ರೋಗ, ದುಶ್ಚಟಗಳು (addiction ), ವ್ಯಕ್ತಿತ್ವದ ವಿಕಾರಗಳು (personality disorders), ವಿವಿಧ ಮಾನಸಿಕ ಕಾರಣಗಳಾಗಿವೆ. ಇನ್ನು ಸಾಮಾಜಿಕ ಕರಣಗಳ್ಲಲಿ ಪ್ರಮುಖವಾದವೆಂದರೆ ಜೀವನದಲ್ಲಿ ಎದುರಾಗುವ ವಿವಿಧ ಸಮಸ್ಯೆಗಳು, ಆತ್ಮಹತ್ಯೆಯನ್ನು ಪರೋಕ್ಷವಾಗಿ ಪ್ರಚೋದಿಸುವ ಮಾಧ್ಯಮದ ವರದಿಗಳು.
ಇನ್ನು ಆತ್ಮಹತ್ಯೆಯ ಕುರಿತು ನಮ್ಮ ದೃಷ್ಟಿಕೋನವನ್ನ ಬದಲಾಯಿಸುವದು ಹೇಗೆಂದು ನೋಡೋಣ . ವ್ಯಕ್ತಿಗತ ನೆಲೆಗಟ್ಟಿನಲ್ಲಿ ನಾವು ಮಾಡಬೇಕಾಗಿರುವದು ಮಾನಸಿಕ ಆರೋಗ್ಯದ ಬಗ್ಗೆ ಹಾಗೂ ವಿಶೇಷವಾಗಿ ಆತ್ಮಹತ್ಯೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಮೀರಿ ಸಮಾಜದಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವದು. ನಮ್ಮ ಪ್ರೀತಿ ಪಾತ್ರರಲ್ಲಿ ಮನೋರೋಗದ ಲಕ್ಷಣಗಳು ಕಂಡು ಬಂದಾಗ ಅವುಗಳನ್ನು ನಿರ್ಲಕ್ಷಿಸದೆ ತ್ವರಿತವಾಗಿ ಅವಶ್ಯಕ ಸಹಾಯ ಪಡೆಯುವಂತೆ ಪ್ರೇರೇಪಿಸುವದು.ಜೀವನದಲ್ಲಿ ಜಿಗುಪ್ಸೆ, ನಿರಾಸೆಯನ್ನು
ಅನುಭವಿಸುತ್ತಿರುವ ವ್ಯಕ್ತಿಗಳ ಮನಸ್ಥಿತಿಯ ಮೇಲೆ ನಿಗಾ ಇರಿಸುವದು ಹಾಗೂ ಅವರಲ್ಲಿ ಆತ್ಮಹತ್ಯಯ ವಿಚಾರಗಳು ಸುಳಿದರೆ ಅವುಗಳನ್ನು ಉಡಾಫೆಯ ದೃಷ್ಟಿಯಿಂದ ನೋಡದೇ, ಸಮರೋಪಾದಿಯಲ್ಲಿ ಅವರ ನೆರವಿಗೆ ಒದಗುವದು. ಆತ್ಮಹತ್ಯೆಯ ಮುನ್ಸೂಚಕ ಅಪಾಯದ ಚಿಹ್ನೆಗಳೆಂದರೆ ಸಮಾಜದಿಂದ ವಿಮುಖರಾಗುವದು, ಸಾವು ಮತ್ತು ಆತ್ಮಹತ್ಯೆಯ ಬಗ್ಗೆ ಪದೇ ಪದೇ ಚರ್ಚಿಸುವಾದವು,ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಮಾತನಾಡುವದು, ಡೆತ್ ನೋಟ್ ಬರೆದಿಡುವದು ಇತ್ಯಾದಿ. ಈ ಮೇಲ್ಕಂಡ ನಡುವಳಿಕೆಗಳು ಯಾರಲ್ಲಾದರೂ ಕಂಡು ಬಂದರೆ ಕೂಡಲೇ ಎಚ್ಛೆತ್ತುಕೊಂಡು ಅವಶ್ಯಕ ಸುರಕ್ಷತಾ ಮುಂಜಾಗ್ರತೆಗಳನ್ನು ಕೈಗೊಂಡು ಅಂಥವರನ್ನು ಮನೋವೈದ್ಯರ ಬಳಿ ಕರೆದೊಯ್ಯುವದು ಅತ್ಯವಶ್ಯಕ.
ಸಾಮಾಜಿಕ ನೆಲೆಗಟ್ಟಿನಲ್ಲಿ ನೋಡಿದರೆ ನಾವು ಒಂದು ಸಮಾಜವಾಗಿ ಮನೋರೋಗಿಗಳ ಹಾಗೂ ಮನೋರೋಗಗಳ ಬಗ್ಗೆ ವಸ್ತುನಿಷ್ಠ ವೈಜ್ಞಾನಿಕ ದೃಷ್ಠಿಕೋನಗಳನ್ನು ಮೈಗೂಡಿಸಿಕೊಳ್ಳಬೇಕು. ಮಾನಸಿಕ ರೋಗಗಳ ಬಗ್ಗೆ ಇರುವ ಅಜ್ಞಾನ, ಅಸಡ್ಡೆಗಳನ್ನುತೊರೆಯಬೇಕು. ದೈಹಿಕ ರೋಗಿಗಳಂತೆ ಮಾನಸಿಕ ರೋಗಿಗಳಿಗೂ ಸಹಾನುಭೂತಿ, ಸಾಂತ್ವನ ಹಾಗೂ ವೈದ್ಯಕೀಯ ಸವಲತ್ತುಗಳನ್ನು ಒದಗಿಸಬೇಕು. ಆತ್ಮಹತ್ಯೆಯ ಹೊಸ್ತಿಲಲ್ಲಿರುವರಿಗೆ ಆತ್ಮಹತ್ಯಾ ಸಹಾಯವಾಣಿಗಳು ಜೀವರಕ್ಷಕವಾಗಬಹುದು. ಮಾಧ್ಯಮಗಳು ಆತ್ಮಹತ್ಯೆಯ ಪ್ರಸಂಗಗಳನ್ನು ವೈಭವೀಕರಿಸಿ ಬರಯುವದನ್ನಾಗಲಿ, ಬಿತ್ತರಿಸುವದನ್ನಾಗಲಿ ತೊರೆಯಬೇಕು. ಇಂತಹ ವರದಿಗಳು ಆತ್ಮಹತ್ಯೆಯ ಹೊಸ್ತಿಲಲ್ಲಿರುವರನ್ನು ಇನ್ನಷ್ಟು ಆತ್ಮಹತ್ಯೆಗೆ ಪ್ರೇರೇಪಿಸುವದು ಧೃಡಪಟ್ಟಿದೆ.
ಸರ್ಕಾರವು ಈ ನಿಟ್ಟಿನಲ್ಲಿ ಈಗಾಗಲೇ ಒಂದು ಐತಿಹಾಸಿಕ ಪರಿವರ್ತನೆಯನ್ನು ತಂದಾಗಿದೆ. ಅದೇನೆಂದರೆ, ಆತ್ಮಹತ್ಯೆಯನ್ನು ಅಪರಾಧಗಳ ಪಟ್ಟಿಯಿಂದ ತಗೆದು ಹಾಕಿರುವದು. ಹೌದು. ಮೆಂಟಲ್ ಹೆಲ್ತ್ ಕೇರ್ ಆಕ್ಟ್ ೨೦೧೭ರ ಅಡಿಯಲ್ಲಿ, ಆತ್ಮಹತ್ಯೆಯ ಪ್ರಯತ್ನವನ್ನು ಒಂದು ಅಪರಾಧವಾಗಿ ಪರಿಗಣಿಸುವ ಹಾಗಿಲ್ಲ. ಆತ್ಮಹತ್ಯೆಗೆ ಪ್ರಯತ್ನ ಪ್ರಯತ್ನ ಪಟ್ಟಿರುವ ವ್ಯಕ್ತಿಯನ್ನು ಅಪರಾಧಿ ಎಂಬ ದೃಷ್ಟಿಯಿಂದ ನೋಡದೆ, ಅವನ ಮೇಲೆ ಯಾವುದೇ ಕೇಸ್ ದಾಖಲಿಸದೆ, ಅವನಿಗೆ ಸೂಕ್ತ ಚಿಕಿತ್ಸೆ ಒದಗಿಸುವ ಕೆಲಸವಾಗಬೇಕು ಎಂದು ಈ ಕಾನೂನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.
ಗೆಳೆಯರೇ, ಬನ್ನಿ. ಜಗತ್ತನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಯಾದ ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವು, ನೀವು ಒಂದು ಹೆಜ್ಜೆ ಮುಂದಿಡೋಣ. ದೃಷ್ಟಿಕೋನ ಬದಲಾಯಿಸೋಣ, ಚಿತ್ರಣ ಬದಲಾಯಿಸೋಣ.

ಡಾ.ಭೀಮಸೇನ ಟಕ್ಕಳಕಿ
ಮನೋರೋಗ ತಜ್ಞವೈದ್ಯರು
ಬೆಳಗಾವಿ