ಬೆಳಗಾವಿ : ರಾಜ್ಯದ ಮೂರನೇ ಅತ್ಯಂತ ಹೆಚ್ಚು ಪ್ರಯಾಣಿಕರು ಸಂಚರಿಸುವ ವಿಮಾನ ನಿಲ್ದಾಣ ಎಂಬ ತನ್ನ ಹೆಗ್ಗಳಿಕೆಯನ್ನು ಇಲ್ಲಿಯ ಸಾಂಬ್ರಾ ವಿಮಾನ ನಿಲ್ದಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾದ ಬೆಂಗಳೂರು ಪ್ರಥಮ ಹಾಗೂ ಮಂಗಳೂರು ದ್ವೀತೀಯ ಸ್ಥಾನದಲ್ಲಿ ಮುಂದುವರೆದಿವೆ.

ಬೆಳಗಾವಿ {ಸಾಂಬ್ರಾ} ವಿಮಾನ ನಿಲ್ದಾಣದಿಂದ ಪ್ರಸಕ್ತ ವರ್ಷದ ಜುಲೈ ತಿಂಗಳಲ್ಲಿ  27,860 ಪ್ರಯಾಣಿಕರು ವಿಮಾನಯಾನ ಕೈಗೊಂಡಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 21046 ಪ್ರಯಾಣಿಕರು ಪ್ರಯಾಣಿಸಿದ್ದರು. 2024ರ ಏಪ್ರೀಲ್‌ದಿಂದ ಜುಲೈವರೆಗೆ 120947 ಹಾಗೂ ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ 84854 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಅದರಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 2024ರ ಜುಲೈ ತಿಂಗಳಲ್ಲಿ 26763 ಹಾಗೂ ಏಪ್ರೀಲ್‌ ದಿಂದ ಜುಲೈವರೆಗೆ 98181 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಹುಬ್ಬಳ್ಳಿ ವಿಮಾಣ ನಿಲ್ದಾಣಕ್ಕಿಂತ ಬೆಳಗಾವಿಯಿಂದ  ವಿಮಾನಯಾನ ಕೈಗೊಳ್ಳುವವರ ಸಂಖ್ಯ ಹೆಚ್ಚಾಗಿದೆ,

ಬೆಂಗಳೂರಿನಿಂದ 2847201 ಹಾಗೂ ಮಂಗಳೂರಿನಿಂದ 134637 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ವಿಮಾನಯಾಣ ಪ್ರಾಧಿಕಾರವು ಬಿಡುಗಡೆಗೊಳಿಸಿದ ಅಂಕಿಸಂಖ್ಯೆಯಿಂದ ತಿಳಿದುಬಂದಿದೆ. ಈ ಬೆಳಗಾವಿ ವಿಮಾನ ನಿಲ್ದಾಣ ವರ್ಷದಿಂದ ವರ್ಷಕ್ಕೆ ತನ್ನ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಗೊಂಡಿರುವ ಬೆಳಗಾವಿ ವಿಮಾನ ನಿಲ್ದಾಣ ಸಾಕಷ್ಟು ಐತಿಹಾಸಿಕ ಹಿರಿಮೆಯನ್ನು ಪಡೆದುಕೊಂಡಿದೆ. ಗೋವಾ ವಿಮೋಚನೆ ಕಾಲಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದ ಮುಖ್ಯವಾಗಿ ಭಾರತದ ವಿವಿಧ ಸೇನಾ ಕಾರ್ಯಚರಣೆಗಳು ಸಾಗಿತ್ತು. ಬೆಳಗಾವಿ ವಿಭಾಗ ಕೇಂದ್ರವಾಗಿ ಮೊದಲಿನಿಂದಲೂ ಗುರುತಿಸಿಕೊಂಡಿದೆ. ಜೊತೆಗೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಬೆಳಗಾವಿ ಅತ್ಯಂತ ಸನಿಹದಲ್ಲಿದೆ. ಹೀಗಾಗಿ ಉತ್ತರ ಕರ್ನಾಟಕ ನಾಗರಿಕರ ಜೊತೆಗೆ ನೆರೆಯ ರಾಜ್ಯಗಳ ಪ್ರಯಾಣಿಕರು ಮೊದಲಿನಿಂದಲೂ ಬೆಳಗಾವಿ ವಿಮಾನ ನಿಲ್ದಾಣವನ್ನೇ ಹೆಚ್ಚಾಗಿ ಆಶ್ರಯಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣವು ಪೈಪೋಟಿ ನೀಡುತ್ತಿದ್ದರೂ ಕೂಡ ಬೆಳಗಾವಿ ವಿಮಾನ ನಿಲ್ದಾಣವು ಪ್ರೈಾಣಿಕರ ಸ್ನೇಹಿಯಾಗಿರುವದರಿಂದ ಹುಬ್ಬಳ್ಳಿಗಿಂತ ಮುಂದಿದೆ. ವಿಜಯಪುರದಲ್ಲೂ ಹೊಸದಾಗಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಆದರೂ ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿಯೂ ಬೆಳಗಾವಿಯ ಪ್ರತಿಷ್ಠಿತ ಸಾಂಬ್ರಾ ವಿಮಾನ ನಿಲ್ದಾಣ ಅತಿ ಹೆಚ್ಚು ಪ್ರಯಾಣಿಕರನ್ನು ಕಾರ್ಯಾಚರಿಸುವ ಮೂಲಕ ಮತ್ತೆ ತನ್ನ ಮೂರನೇ ಸ್ಥಾನವನ್ನು ಉಳಿಸಿಕೊಂಡಿರುವುದು ಹೆಗ್ಗಳಿಕೆ.