ಅಂಕೋಲಾ: ರಾತ್ರಿ ಸುರಿದ ನಿರಂತರ ಮಳೆಯಿಂದಾಗಿ ಅಂಕೋಲಾ- ಕುಮಟಾ ಮಾರ್ಗದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದು ಪರಿಣಾಮ ಮಣ್ಣಿನಡಿ ಸಿಲುಕಿ 7 ಜನರು ಮೃತಪಟ್ಟಿರುವ ಘಟನೆ ಇಂದು ಜರುಗಿದೆ.
ಸೋಮವಾರ ರಾತ್ರಿ ಸುರಿದ ನಿರಂತರ ಮಳೆಯಿಂದಾಗಿ ಉತ್ತರ ಕನ್ನಡದ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಬಿದ್ದಿದ್ದು ಹೆದ್ದಾರಿ ಪಕ್ಕದ ಅಂಗಡಿ ಮನೆಗಳಲ್ಲಿ ರುವ ಸುಮಾರು 6-7 ಜನರು ಮಣ್ಣಿನ ಅಡಿ ಸಿಲುಕಿದ ಶಂಕೆ ವ್ಯಕ್ತವಾಗಿತ್ತು.
ರಾಷ್ಟ್ರೀಯ ಹೆದ್ದಾರಿ 66 ಅಂಕೋಲಾ- ಕುಮಟಾ ಮಾರ್ಗದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದು ಬಿದ್ದಿದೆ. ಲಾರಿ ಸೇರಿದಂತೆ ಕೆಲವು ವಾಹನಗಳು ಮಣ್ಣಿನ ಅಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಗುಡ್ಡದ ಮಣ್ಣಿನ ಜೊತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ ಟ್ಯಾಂಕರ್ ಹರಿಯುತ್ತಿರುವ ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು , ಅದರಲ್ಲಿದ್ದ ಚಾಲಕ ಹಾಗೂ ಕ್ನೀನರ್ ನಾಪತ್ತೆಯಾಗಿದ್ದಾರೆ. ಭಾರಿ ಪ್ರಮಾಣದ ಮಣ್ಣು ನದಿಗೆ ಬಿದ್ದು ನೀರು ಸಾರಾಗವಾಗಿ ಹರಿಯಲು ತೊಂದರೆ ಆಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು ವಾಹನಗಳು ಸಾಲುಗಟ್ಟಿ ನಿಂತಿವೆ.
ರಾಷ್ಟ್ರೀಯ ಹೆದ್ದಾರಿಯ 66ರಲ್ಲಿ ಹೆದ್ದಾರಿ ಅಗಲೀಕರಣಕ್ಕಾಗಿ ರಸ್ತೆ ಪಕ್ಕದ ಗುಡ್ಡ ಅಗೆಯಲಾಗಿತ್ತು. ಈಗ ಭಾರಿ ಮಳೆಯ ಕಾರಣದಿಂದ ಗುಡ್ಡ ಕುಸಿತ ಉಂಟಾಗಿದೆ. ಕಿನ್ನರ ಗ್ರಾಮದ ನಿರಾಕಾರ ದೇವಾಲಯದ ಬಳಿ ಸಹ ಗುಡ್ಡ ಕುಸಿತವಾಗಿದ್ದು ಪಕ್ಕದಲ್ಲಿದ್ದ ಹಂಚಿನ ಮನೆಗೆ ಸಂಪೂರ್ಣ ಹಾನಿಯಾಗಿದೆ. ಅಗ್ನಿಶಾಮಕ ದಳ ಮತ್ತು ಎನ್ ಡಿ ಆರ್ ಎಫ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭೇಟಿ ನೀಡಿ ಪರಿಶೀಲಿಸಿದರು.