ಚಿಕ್ಕೋಡಿ: ಕಳೆದ ೪೫ ವರ್ಷಗಳ ಹಿಂದೆ ಈ ಭಾಗವು ಆರೋಗ್ಯ ಮತ್ತು ಶಿಕ್ಷಣದಲ್ಲಿ ಸಾಕಷ್ಟು ಹಿಂದೆ ಉಳಿದಿತ್ತು. ಈಗ ಅಗಾಧವಾದ ಬದಲಾವಣೆಯಾಗಿದೆ. ಎಲ್ಲ ರೀತಿಯ ಶಿಕ್ಷಣ ಒಂದೇ ಸೂರಿನಲ್ಲಿ ಸಿಗುತ್ತಿದೆ. ಅದಕ್ಕೆಲ್ಲ ಕಾರಣ ಕೆಎಲ್ ಇ ಸಂಸ್ಥೆ ಹಾಗೂ ಅದರ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ದೂರದೃಷ್ಟಿ ಹಾಗೂ ಇಚ್ಚಾಶಕ್ತಿಯೇ ಕಾರಣ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪದ್ಮಭೂಷಣ ಜೈಶಂಕರ ಅವರಿಂದಿಲ್ಲಿ ಹೇಳಿದರು.
ಚಿಕ್ಕೋಡಿಯಲ್ಲಿ ಕೆಎಲ್ ಇ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಕೆಎಲ್ಇ ಸ್ಕೂಲ್ಅನ್ನು ಬುಧವಾರ ದಿ. 28 ಫೆಬ್ರುವರಿ, 2024 ರಂದು ಉದ್ಘಾಟಿಸಿ ಮಾತನಾಡಿದ ಅವರು, ದೇಶವು ಅಮೃತ ಕಾಲದಲ್ಲಿದ್ದು ಕಳೆದ ಒಂದು ದಶಕದಲ್ಲಿ ಅಭಿವೃದ್ಧಿಯ ಸುವರ್ಣ ಕಾಲದಲ್ಲಿದ್ದೇವೆ. ಸರಕಾರದ ಹೊರತಾಗಿಯೂ ಕೆಎಲ್ ಇ ಸಂಸ್ಥೆಯ ಅಭಿವೃದ್ಧಿಯ ಪಥದಲ್ಲಿ ಸಮಾಜವನ್ನು ಮುನ್ನಡೆಸುತ್ತಿದೆ.ಅನೇಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜನರಿಗೆ ಆರೋಗ್ಯ, ಶಿಕ್ಷಣ ಹಾಗೂ ಕೃಷಿಗೆ ಪೂರಕವಾದ ಚಟುವಟಿಕೆಗಳನ್ನು ಏರ್ಪಡಿಸುತ್ತಿರುವದು ಅತಗಯಂತ ಶ್ಲಾಘನೀಯ ಎಂದು ಪ್ರಶಂಸಿಸಿದರು.
ಕಳೆದ 10. ವರ್ಷಗಳಲ್ಲಿ ದೇಶದಲ್ಲಿ ಶಿಕ್ಷಣದಲ್ಲಿ ಕ್ರಾಂತಿಯಾಗಿದೆ. ಎರಡು ದಿನಕ್ಕೆ ಒಂದು ಮಹಾವಿದ್ಯಾಲಯ, ವಾರಕ್ಕೊಂದು ವಿಶ್ವವಿದ್ಯಾಲಯ ನಿರ್ಮಾಣವಾಗಿವೆ. ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲು ಕೌಶಲ್ಯಭರಿತ ಮಾನವ ಸಂಪನ್ಮೂಲ ಅತ್ಯವಶ್ಯಕ. ಅದರಂತೆ ಯುವಕರನ್ನು ಹೆಚ್ಚಾಗಿ ಹೊಂದಿರುವ ಭಾರತವು ಉದ್ಯಮಾಧಾರಿತ ಸಂಸ್ಥೆಗಳು ಹೆಚ್ಚೆಚ್ಚು ಸ್ಥಾಪನೆಯಾಗಬೇಕು ಎಂಬ ಉದ್ದೇಶದಿಂದ ಅಮೂಲಾಗ್ರ ಬದಲಾವಣೆ ತಂದು ಯುರೋಪ ದೇಶದ ಜನಸಂಖ್ಯೆಯಷ್ಟು ಭಾರತೀಯ ಜನರಿಗೆ ಮುದ್ರಾ ಸಾಲ ನೀಡಿ ಅವರನ್ನು ಉದ್ಯಮಿಗಳನ್ನಾಗಿ ಮಾಡಲಾಗಿದೆ. ಅದಕ್ಕೆ ಪೂರಕವಾದ ತರಬೇತಿ ನೀಡಲು ಸ್ಕಿಲ್ ಇಂಡಿಯಾ, ಸ್ಟಾರ್ಟಾಪ್ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮುಂಬರುವ ದಶಕವು ಕೃತಕಬುದ್ದಿಮತ್ತೆಯಿಂದ ಕೂಡಿರಲಿದೆ.ಆರೋಗ್ಯ ಕ್ಷೇತ್ರದಲ್ಲಿ ರೊಬೊಟಿಕ್ ಸಹಕಾರ ಅತ್ಯಧಿಕವಾಗಲಿದೆ. ವಿದ್ಯುತ್ ಆಧಾರಿತ ವಾಹನಗಳ ಯುಗ ತೀವ್ರಗೊಳ್ಳಲಿದೆ. ಆರೋಗ್ಯ ಕಾಪಾಡಲು ಆಯುಷ್ಯ ಮಾನ ಭಾರತ ಯೋಜನೆ ಜಾರಿಗೆ ತರಲಾಗಿದೆ ಎಂದ ಅವರು, ಈ ಮೊದಲು ವಿದೇಶಾಂಗ ನೀತಿಯು ಸರಳವಾಗಿರಲಿಲ್ಲ. ಅದಕ್ಕೆ ಅಮೂಲಾಗ್ರ ಬದಲಾವಣೆ ತರಲಾಗಿದೆ. ದೇಶದಲ್ಲಿ ಪಾಸ್ಪೋರ್ಟ್ ಪಡೆಯಲು ಈ ಮೊದಲು ಕೇವಲ 77 ಸೇವಾ ಕೇಂದ್ರಗಳಿದ್ದವು. ಅವುಗಳನ್ನು ಈಗ 527. ಕ್ಕೇರಿಸಲಾಗಿದೆ. ಭ್ರಷ್ಟಾಚಾರ ಮುಕ್ತ ಪಾರದರ್ಶಕತೆ ಯನ್ನು ಅಳವಡಿಸಿಕೊಂಡು ಕಡಿಮೆ ಅವಧಿಯಲ್ಲಿ ಪಾಸ್ಪೋರ್ಟ್ ನೀಡಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ ಜೋಶಿಯವರು ಮಾತನಾಡಿ, ನಾನು ಕೆಎಲ್ಇ ಸಂಸ್ಥೆಯ ವಿದ್ಯಾರ್ಥಿ. ಕೆಎಲ್ಇ ಕಾಲೇಜಿನ ಮೂಲಕ ಪದವಿಯನ್ನು ಪಡೆದು ಬೆಳೆದವನು. ಅಂದರೆ ಕೆಎಲ್ಇ ಸಂಸ್ಥೆಯು ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದರ ಫಲವಾಗಿ ಅಸಂಖ್ಯ ವಿದ್ಯಾರ್ಥಿಗಳ ಬದುಕನ್ನು ಅರಳಿಸಿತು. ಇಂದು ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿದೆ. ಸಂಸ್ಥೆಯು ಡಾ.ಕೋರೆಯವರ ಸಾರಥ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ ಎಂದರು.
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಪುಟ್ಟ ಶಾಲೆಯಿಂದ ೧೯೧೬ ರಲ್ಲಿ ಸ್ಥಾಪನೆಗೊಂಡ ಕೆಎಲ್ಇ ಸಂಸ್ಥೆ ಇಂದು ೩೧೦ಅಂಗ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ದಾನಿಗಳು-ಮಹಾದಾನಿಗಳಿಂದ ಬೆಳೆದು ನಿಂತಿದ್ದು, ಶಿಕ್ಷಣ-ಆರೋಗ್ಯ-ಸಂಶೋಧನೆಯ ಮೂಲಕ ಜಾಗತಿಕವಾಗಿ ವಿಸ್ತರಿಸಿದೆ. ಆಲೋಪತಿ-ಆಯುರ್ವೇದ-ಹೋಮಿಯೋಪಥಿ ಮೂಲಕ ೪೫೦೦ ಹಾಸಿಗೆಗಳ ಬೃಹತ್ ಆರೋಗ್ಯ ಜಾಲವನ್ನು ಹೊಂದಿದೆ. ಬೆಳಗಾವಿಯಲ್ಲಿ ೩೦೦ ಹಾಸಿಗೆಗಳ ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆ ಸಿದ್ದಗೊಂಡಿದೆ. ಮುಂಬರುವ ಒಲಂಪಿಕ್ಸ್ದಲ್ಲಿ ಸಾಧನೆಗೆ ಅಣಿಯಾಗಿದ್ದು, ಅತ್ಯುತ್ತಮ 100 ವಿಶ್ವವಿದ್ಯಾಲಯಗಳಲ್ಲಿ ಒಂದಾಲಿದೆ. ಅಲ್ಲದೇ ಸಂಶೋಧನೆಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು
ಡಾ. ವಿ ಎಸ್ ಸಾದುನವರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಕೆಎಲ್ಇ ನಿರ್ದೇಶಕರಾದ ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷರಾದ ಪ್ರವೀಣ ಕಾಂಬಳೆ, ಕೆಎಲ್ಇ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು. ಡಾ.ಪ್ರಭಾಕರ ಕೋರೆಯವರು ಕೇಂದ್ರ ಸಚಿವ ಡಾ.ಎಸ್.ಜೈ ಶಂಕರ ಅವರಿಗೆ ಬಸವಣ್ಣನವರ ಬೆಳ್ಳಿಯ ಮೂರ್ತಿಯನ್ನು ನೀಡಿ ಸತ್ಕರಿಸಿದರು. ಕೆಎಲ್ಇ ನಿರ್ದೇಶಕರಾದ ವಿಶ್ವನಾಥ್ ಪಾಟೀಲ್, ಬಸವರಾಜ ಪಾಟೀಲ್, ಮಹಾಂತೇಶ್ ಕವಟಗಿಮಠ, ಜಯಾನಂದ ಮುನವಳ್ಳಿ, ಎಸ್ ಸಿ ಮೆಟಗುಡ್, ವಾಯ್ ಎಸ್ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕಿ ಜಿನಲ್ ಶಹಾ, ಗಂಗಾ ಅರಭಾವಿ ನಿರೂಪಿಸಿದರು. ಪ್ರಾಚಾರ್ಯ ಚೇತನ ಅಲವಾಡೆ ವಂದಿಸಿದರು.