ಬೆಳಗಾವಿ:ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC)ಯು ಬೆಳಗಾವಿ ವಿಭಾಗಕ್ಕೆ ಅಶೋಕ ಲೇಲ್ಯಾಂಡ ನಿರ್ಮಿತ BS-VI ಮಾದರಿಯ 50 ಹೊಸ ಪರಿಸರ ಸ್ನೇಹಿ ಬಸಗಳನ್ನು ನೀಡಿದ್ದು, ಬೆಳಗಾವಿಗರಿಗೆ ಅನುಕೂಲವಾಗಿದೆ. ಸಿಸಿಟಿವಿ ಕ್ಯಾಮೆರಾ, ಎಲೆಕ್ಟ್ರಾನಿಕ್ ವೆಹಿಕಲ್ ಸ್ಟೆಬಿಲಿಟಿ, ಕಂಟ್ರೋಲ್ ಸಿಸ್ಟಮ್ ಮತ್ತು ಆನ್ಬೋರ್ಡ್ ಡಯಾಗ್ನೋಸ್ಟಿಕ್ ಸಿಸ್ಟಮ್ ಸೇರಿದಂತೆ ಹಲವಾರು ಸುರಕ್ಷತಾ ಕ್ರಮಗಳನ್ನು ಒಳಗೊಂಡಿವೆ.
ಈ ಹೊಸ ಬಸ್ಗಳನ್ನು ಪ್ರಾರಂಭಿಸಿರುವುದು ಬೆಳಗಾವಿಯಲ್ಲಿ ಸಾರ್ವಜನಿಕ ಸಾರಿಗೆಗೆ ಸಕಾರಾತ್ಮಕ ಬೆಳವಣಿಗೆಯಾಗಿದೆ. ಹೊಸ ಬಸ್ಗಳು ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣದ ಅನುಭವವನ್ನು ಒದಗಿಸುತ್ತವಲ್ಲದೆ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಸಹಕರಿಸುತ್ತವೆ. ನೂತನವಾಗಿ ನೀಡಲಾದ ಬಸಗಳನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬೆಳಗಾವಿಯಲ್ಲಿ ಜನಸೇವೆಗೆ ಅರ್ಪಿಸಿದರು.
ಅಪಘಾತರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಮಾತನಾಡಿದ ಅವರು 2 ಸಾವಿರಕ್ಕಿಂತಲೂ ಅಧಿಕ ವಾಹನ ಚಾಲಕರ ಹಾಗೂ ನಿರ್ವಾಹಕರ ಹುದ್ದೆಗಳ ಭರ್ತಿ ಪ್ರಕ್ರಿಯೆ ಕೂಡ ಚಾಲನೆಯಲ್ಲಿದೆ. ಅಪಘಾತಗಳಲ್ಲಿ ಮೃತರಾದ ಬಸ್ ಚಾಲಕರಿಗೆ, ಕಂಡಕ್ಟರಗಳ ವಾರಸುದಾರರಿಗೆ 50 ಲಕ್ಷ ರೂಪಾಯಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಪರಿಹಾರ ಧನವನ್ನು 1 ಕೋಟಿಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಅಪಘಾತ ರಹಿತ 5 ವರ್ಷಗಳ ವಾಹನ ಚಾಲನೆ ಮಾಡಿದ 38 ಬಸ್ ಚಾಲಕರಿಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ ನೀಡಿ, ಸನ್ಮಾನಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಭರಮಗೌಡ (ರಾಜು) ಕಾಗೆ, ಆಸೀಫ್ (ರಾಜು) ಸೇಠ್ ಮಾತನಾಡಿದರು. ಎನ್ ಡಬ್ಲ್ಯ ಕೆಆರ್ ಟಿಸಿ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಭರತ.ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಮುಖ್ಯ ಸಚೆತಕರು ಅಶೋಕ ಪಟ್ಟಣ, ಶಾಸಕ ಬಾಬಾಸಾಹೇಬ್ ಪಾಟೀಲ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ವಾ.ಕ.ರ.ಸಾ ಸಂಸ್ಥೆಯ ಬೆಳಗಾವಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಥೋಡ ಉಪಸ್ಥಿತರಿದ್ದರು.