ರಾಯಚೂರು: ಮೌಢ್ಯ ಮುಕ್ತ ಸಮಾಜ ಕಟ್ಟಬೇಕೆಂಬ ನಿಟ್ಟನಲ್ಲಿ ನಮ್ಮ ಹೋರಾಟವಿದೆ ಹೊರತು ಯಾರ ವಿರುದ್ಧವೂ ಅಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಯಚೂರಿನ ಲಿಂಗಸುಗೂರು ಪಟ್ಟಣದಲ್ಲಿ 2 ದಿನಗಳ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನಕ್ಕೆ ವೇದಿಕೆ ಮೇಲೆ ವೈಜ್ಞಾನಿಕ ರೀತಿ” ಹಾಲು ಉಕ್ಕಿಸುವ ” ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಆಸ್ತಿಯಾಗಿರುವ ಮಕ್ಕಳಾದ ನೀವು, ಮೌಢ್ಯದಿಂದ ಹೊರಬಂದಾಗ ಹೊಸ ಭಾರತ ಕಟ್ಟಬೇಕಿದೆ. ಅದಕ್ಕಾಗಿ ಯುವ ಪಿಳೀಗೆಯು ಬುದ್ದ, ಬಸವ , ಅಂಬೇಡ್ಕರ್ ಮಾರ್ಗದರ್ಶನದಲ್ಲಿ ನಡೆದಾಗ ಇವೇಲ್ಲವೂ ಸಾಧ್ಯ ಎಂದರು.
ಅನೇಕ ದಾರ್ಶನಿಕರು ಹಾಗೂ ಸಂತರು, 12ನೇ ಶತಮಾನದಲ್ಲಿ ಬಸವಾದಿ ಶರಣರು, ಬುದ್ಧರು, ಅನೇಕ ಮಹಾತ್ಮರು ಮೌಢ್ಯತೆಯನ್ನು ಅಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ಮೂಲಕ ಮೌಢ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಅದೇ ರೀತಿ ನಾವುಗಳು ಸಹ ಮೌಢ್ಯ ಮುಕ್ತ ಸಮಾಜ ನಿರ್ಮಿಸಬೇಕಾಗಿದೆ ಎಂದು ಹೇಳಿದರು.
ನಮ್ಮೆಲ್ಲರ ನಡೆ ವಿಜ್ಞಾನ ಕಡೆ, ಭಾರತ ವಿಜ್ಙಾನ ಕಡೆಗೆ ಸಾಗುವುದು ಅತ್ಯವಶ್ಯಕವಾಗಿದೆ. ದೇಶದ ಭವಿಷ್ಯ ಯುವಕರ ಕೈಯಲ್ಲಿ ಇದೆ. ಹೀಗಾಗಿ ಮಕ್ಕಳು ವಿಜ್ಙಾನಕ್ಕೆ ಬಹಳಷ್ಟು ಪ್ರಾಮುಖ್ಯತೆ ನೀಡಬೇಕಿದೆ. ಯಾವ ರೀತಿ ಚಂದ್ರಯಾನ ಯಶಸ್ವಿಯಿಂದ ಭಾರತವು ಬಹಳಷ್ಟು ಹೆಸರು ಮಾಡಿದೆ. ಅದರಂತೆ ವಿಜ್ಞಾನಕ್ಕೆ ಪ್ರಾಮುಖ್ಯತೆ ನೀಡಬೇಕಾಗಿದೆ. ವಿಜ್ಞಾನ ವಸ್ತು ಪ್ರದರ್ಶನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಳಹಷ್ಟು ಸಹಕಾರ ನೀಡಿದೆ ಎಂದರು.
ವೈಜ್ಞಾನಿಕ ಸಮ್ಮೇಳನ ನಂ.1 ಸ್ಥಾನದಲ್ಲಿ ಬರಬೇಕೆಂಬ ಆಸೆಯಿದೆ. ಅದಕ್ಕೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು. ಎನ್ .ಎಸ್. ಬೋಸರಾಜು ಅವರು ಸರ್ಕಾರ ವತಿಯಿಂದ ಈ ಸಮ್ಮೇಳನ ನಡೆಸಲು 2 ಲಕ್ಷ ರೂ. ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಸಮ್ಮೇಳನಕ್ಕೆ 50 ಲಕ್ಷ ರೂ. ಹೆಚ್ಚಳ ಆಗಬೇಕಿದೆ. ಮಾನವ ಬಂದುತ್ವ ವೇದಿಕೆಯಿಂದ ಇಲ್ಲಿ ನಡೆಯುವ ಊಟದ ವ್ಯವಸ್ಥೆಗಾಗಿ 15 ಲಕ್ಷ ರೂ. ನೀಡಲಾಗಿದೆ. ವೈಜ್ಞಾನಿಕ ಸಮ್ಮೇಳನಕ್ಕೆ ಪ್ರತಿ ವರ್ಷ ಒಟ್ಟು 25 ಲಕ್ಷ ನೀಡಲಾಗುವುದು ಎಂದು ಹೇಳಿದರು.
30 ವರ್ಷಗಳಿಂದಿದೆ ನನ್ನ ಹೋರಾಟ: ಈ ಕಾರ್ಯಕ್ರದಮ ಹಲವಾರು ತಿಂಗಳಿನಿಂದ ಯಶಸ್ವಿಗೆ ಡಾ. ಹುಲಿಕಲ್ ನಟರಾಜ ಅವರಿಗೆ ಸಲ್ಲುತ್ತದೆ. ಮೌಢ್ಯ ವಿರುದ್ಧ ಹೋರಾಡಲು ನಾನು ಕಳೆದ 30 ವರ್ಷಗಳಿಂದ ಒಬ್ಬಂಟಿಯಾಗಿ ಹೋರಾಟ ಮಾಡುತ್ತಾ ಬಂದಿದೇನೆ. ಈಗ ಹುಲಿಕಲ್ ನಟರಾಜ ಅವರು ನಮ್ಮ ಕೈ ಬಲ ಪಡಿಸಿದ್ದಾರೆ. ರಾಜ್ಯದಲ್ಲಿ ಈ ರೀತಿ ಯಾರು ಹೋರಾಟ ಮಾಡುತ್ತಾರೋ ಅವರಿಗೆ ನಮ್ಮ ಪ್ರೋತಾಹ ಇದೆ. ನಿಮ್ಮ ಜೊತೆ ಯಾವಾಗಲೂ ನಾವಿದೇವೆ ಎಂದು ಭರವಸೆ ನೀಡಿದರು.
ಪಿಡಬ್ಲೂಡಿ ಇಲಾಖೆಯಿಂದ 5 ಕೋಟಿ ವಿತರಣೆ: ಶಿಡ್ಲಘಟ್ಟದಲ್ಲಿ 10 ಎಕರೆದಲ್ಲಿ ವಿಜ್ಞಾನ ಗ್ರಾಮ ಮಾಡಲು ದೂರ ದೃಷ್ಠಿ ಆಲೋಚನೆ ಮಾಡಲಾಗಿದೆ. ಅದರಲ್ಲೂ ಸಹ ನಮ್ಮ ಇಲಾಖೆ ವತಿಯಿಂದ 3 ತಿಂಗಳ ಹಿಂದಿಯೇ ಸಮುದಾಯ ಭವನ ನಿರ್ಮಾಣ ಮಾಡಲು 5 ಕೋಟಿ ರೂ. ಕೋಡಲಾಗಿದೆ ಎಂದ ಅವರು, ಸಿಎಂ ಅನುಮತಿ ನೀಡಿದರೇ ಪ್ರತಿ ವರ್ಷ ವಿಜ್ಞಾನ ಕೇಂದ್ರಕ್ಕೆ 5 ಕೋಟಿ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಮತ್ತು ಮಾಹಿತಿ ಖಾತೆ ಸಚಿವ ಎನ್.ಎಸ್.ಬೋಸ್‌ರಾಜ್, ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಮಾನಪ್ಪ ವಜ್ಜಲ್, ಶರಣಗೌಡ ಬಯ್ಯಾಪುರ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ, ಡಿ.ಎಸ್.ಹೂಲಗೇರಿ, ಶಾಸಕ ಹಂಪಯ್ಯಾ ನಾಯಕ, ವಿಜ್ಞಾನಿ ಡಾ.ಎ.ಎಸ್.ಕಿರಣ್‌ಕುಮಾರ್, ಎಎಲ್ಸಿ ಶರಣ ಗೌಡ ಪಾಟೀಲ್ ಬಯ್ಯಪುರ, ಪರಿಷತ್ ಅಧ್ಯಕ್ಷ ರವೀಂದ್ರ ಶಾಬಾದಿ ಸೇರಿದಂತೆ ಸ್ಥಳೀಯ ಶಾಸಕರು, ಚಿಂತಕರು ಭಾಗಿಯಾಗಿದ್ದರು.
ಜೀವಮಾನ ಸಾಧನ ಪ್ರಶಸ್ತಿ: ಸಮ್ಮೇಳನದಲ್ಲಿ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಪ್ರಗತಿಪರ ಚಿಂತಕಿ ಬಿ.ಟಿ.ಲಲಿತಾ ನಾಯಕ್, ಅಂತರಾಷ್ಟ್ರೀಯ ಕೌಶಲ್ಯ ತರಬೇತುದಾರ ಚೇತನ್‌ರಾಮ್, ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕಾಯಿ ಪದ್ಮಸಾಲಿ, ಪ್ರಗತಿಪರ ಚಿಂತಕ ಆರ್.ಮಾನಸಯ್ಯ ಇವರಿಗೆ ಜೀವಮಾನ ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ವಿಶಿಷ್ಟ ಸೇವಾ ಪ್ರಶಸ್ತಿಗೆ ಸಂತೆಕೆಲ್ಲೂರಿನ ಡಾ.ಸಿದ್ಧರಾಮಪ್ಪ ಸಾಹುಕಾರ, ಬೆಂಗಳೂರಿನ ಬಿ.ಸಿ.ಕಿರಣಕುಮಾರ್, ಕೂಡ್ಲಿಗಿ ಎನ್.ಲಕ್ಷ್ಮಿದೇವಿ, ಲಿಂಗಸುಗೂರಿನ ಬಸಮ್ಮ ತೆಗ್ಗಿನಮನಿ, ಚಿಕ್ಕನಾಯಕನಹಳ್ಳಿ ಜಗದೀಶ, ಹಾಸನದ ಜಯಪ್ರಸಾದ್, ಬಾಗಲಕೋಟಿಯ ರಕ್ಷಿತಾ ಭರತ್‌ಕುಮಾರ ಈಟಿ, ತುಮಕೂರಿನ ಎಚ್.ಎಸ್.ನವೀನ್‌ಕುಮಾರ್, ಹಾಸನ ಗೋಪಾಲ್, ಸುಧಾ ಬೆಂಗಳೂರು, ಎಂ.ಮಂಜುನಾಥ, ಲಯನ್ ಮುನಿರಾಜು ಹಾಗೂ ವಿಶೇಷವಾಗಿ ವಿಜ್ಞಾನ ಗ್ರಾಮಕ್ಕೆ 10 ಎಕರೆ ಜಾಗವನ್ನು ದಾನವಾಗಿ ನೀಡಿರುವ ಆರ್.ರವಿ ಬಿಳಿಶಿವಾಲೆ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ 37 ಶೈಕ್ಷಣಿಕ ಜಿಲ್ಲೆಗಳಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯಮಟ್ಟದ ಎಚ್.ಎನ್.ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.