ಬೆಳಗಾವಿ: ಬೆಳಗಾವಿಯಿಂದ ಗೋವಾಕ್ಕೆ ಸಂಪರ್ಕಿಸುವ ಹೆದ್ದಾರಿಯನ್ನು ಕರ್ನಾಟಕದ ಗಡಿಯವರಿಗೆ ಅಭಿವೃದ್ಧಿ ಪಡಿಸಲು ಸುಮಾರು 58 ಕೋಟಿ ಮಂಜೂರಾಗಿದೆ. ಒಂದು ವಾರದೊಳಗೆ ಟೆಂಡರ್ ಕರೆದು ಏಪ್ರಿಲ್ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಂದಿಲ್ಲಿ ಹೇಳಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಿಂದ ಗೋವಾಗೆ ಸಂಚರಿಸಲು ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಅದನ್ನು ಅಭಿವೃದ್ದಿಗೊಳಿಸಲು ಯೋಜನೆ ರೂಪಿಸಲಾಗಿದೆ. ಅದರಂತೆ ಕಾಮಗಾರಿಯನ್ನು ಬರುವ ಏಪ್ರೀಲನಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ವಿವರಿಸಿದರು.

‘ಬೆಳಗಾವಿ– ಪಣಜಿ ರಸ್ತೆಯಿಂದ ಪುಣೆ– ಬೆಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಹಲಗಾ– ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. 2024ರ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಸಂಚಾರ ಆರಂಭವಾಗಲಿದೆ. ಕಾಮಗಾರಿಗೆ ಇದ್ದ ಕಾನೂನು ಅಡೆತಡೆಗಳು ತೆರವುಗೊಂಡಿವೆ. ಆದರೆ
ಗುತ್ತಿಗೆದಾರರು ಕಂಪನಿಯ ಅವಧಿ ಮುಗಿದು ಹೊರನಡೆದ ಕಾರಣ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ಅದೇ ಗುತ್ತಿಗೆದಾರರು ಕಾಮಗಾರಿಯನ್ನು ಮುಂದುವರಿಸಬೇಕೆಂದು ನಾವು ಬಯಸುತ್ತೇವೆ. ಈಗಾಗಲೇ ಮಾತನಾಡಿದ್ದು ಅವರು ಒಪ್ಪಿಗೆ ನೀಡಿದ್ದಾರೆ’ ಎಂದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸಬೇಕಾಗಿದೆ. ಇಲ್ಲದಿದ್ದರೆ ಯೋಜನೆ ಸ್ಥಗಿತವಾಗುತ್ತದೆ. ಈಗಾಗಲೇ ಕೇಂದ್ರ ಲೋಕೋಪಯೋಗಿ ಸಚಿವರ ಹತ್ತಿರ ಮೂರು ತಿಂಗಳ ಕಾಲಾವಕಾಶ ಕೇಳಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಶೀಘ್ರ ಚರ್ಚಿಸುತ್ತೇನೆ̤ ಎಂದರು.

ರಾಜ್ಯದಲ್ಲಿ ಅಭಿವೃದ್ದಿಗೊಳ್ಳುತ್ತಿರುವ ರಾಷ್ಟ್ರ್ರೀಯ ಹೆದ್ದಾರಿಗಳ ಕುರಿತು ಈಗಾಗಲೇ ಗೋವಾದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದೇನೆ. ರಾಜ್ಯದಲ್ಲಿ ರೂ.10 ಸಾವಿರ ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿವೆ. ಮೂರು ತಿಂಗಳಲ್ಲಿ ಎಲ್ಲ ಅಡೆತಡೆ ನಿವಾರಿಸಿ ಹೆದ್ದಾರಿ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಕಳೆದ 12 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ರಾಜ್ಯಕ್ಕೆ ರೂ.10 ಸಾವಿರ ಕೋಟಿ ಮಂಜೂರು ಮಾಡಲಾಗಿದೆ.  ಇದುವರೆಗೆ ರೂ. 2,000 ಕೋಟಿ ಖರ್ಚಾಗಿದೆ. 15 ಕಡೆಗಳಲ್ಲಿ ಕಾಮಗಾರಿ ಸ್ಥಗಿತವಾಗಿದೆ. ಅರಣ್ಯ ಒತ್ತುವರಿ, ಭೂ ಸಮಸ್ಯೆ, ಗ್ರಾಮಗಳ ಸ್ಥಳಾಂತರ ಮುಂತಾದ ಹಲವಾರು ಕಾರಣಗಳಿವೆ. ಈಗ ಕಾಮಗಾರಿ ನಡೆಯದಿದ್ದರೆ ರಾಜ್ಯಕ್ಕೆ ಹಿನ್ನಡೆ ಆಗಲಿದೆ ಎಂದ ಅವರು,  ವಿಜಯಪುರ– ಹುಬ್ಬಳ್ಳಿ ಮಾರ್ಗದ ರಸ್ತೆ ಕೇವಲ ಶೇ 1ರಷ್ಟು ಮಾತ್ರ ಬಾಕಿ ಇದೆ. ಗೋವಾ ಗಡಿಯಿಂದ ಕರಾವಳಿಯ ಕುಂದಾಪುರವರೆಗೆ ರಸ್ತೆ ಮಾಡಲು ಅರಣ್ಯ ಇಲಾಖೆಯ ತಕರಾರುಗಳಿವೆ. ಇದೇ ರೀತಿ ಆರು ಕಡೆ ಅರಣ್ಯ ಇಲಾಖೆಯಿಂದ ತಡೆ ಬಿದ್ದಿದೆ. ಹೆದ್ದಾರಿ ಪ್ರಾಧಿಕಾರದಲ್ಲಿ ಹಣದ ಕೊರತೆ ಇಲ್ಲ. ಅದನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ ಎಂದರು.

ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡಚಣೆಯಾದ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ,  ಅರಣ್ಯ ಇಲಾಖೆ ಮುಂತಾದ ವಿವಿಧ ಇಲಾಖೆಗಳ ಅಧಿಕಾರಗಳ ಜೊತೆ ಈಗಾಗಲೇ ಸಭೆ ನಡೆಸಲಾಗಿದೆ. ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.