ಬೆಳಗಾವಿ, ಅ.6: ಮಳೆಯ ಕೊರತೆಯಿಂದ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಐದು ಜನ ಅಧಿಕಾರಿಗಳ ತಂಡವು ಇಂದು ಪರಿಶೀಲಿಸಿತು.
ನಗರದಲ್ಲಿ ಶುಕ್ರವಾರ (ಅ.6) ಬೆಳಿಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಬರಪೀಡಿತ ಪ್ರದೇಶಗಳಿಗೆ ಭೇಟಿ ಪ್ರಾರಂಭಿಸಿದ ತಂಡವು ಮೊದಲಿಗೆ ಬೈಲಹೊಂಗಲ ತಾಲ್ಲೂಕಿನ ನೇಸರಗಿ ಬಳಿಯ ನಾಗಪ್ಪ ಹಬಿ ಅವರ ಜಮೀನಿನಲ್ಲಿ ಸೋಯಾಬಿನ್ ಹಾಗೂ ರಾಜು ಹೊಂಗಲ್ ಹಾಗೂ ಬಸಪ್ಪ ಕುಂಟಿಗೇರಿ ಅವರ ಜಮೀನಿನಲ್ಲಿ ಕ್ಯಾರೆಟ್ ಬೆಳೆಹಾನಿಯನ್ನು ವೀಕ್ಷಿಸಿದರು.
ಎಕರೆಗೆ 52 ಸಾವಿರ ಎರಡು ಎಕರೆಗೆ ಒಂದು ಲಕ್ಷಕ್ಕೂ ಅಧಿಕ ಖರ್ಚು ಮಾಡಲಾಗಿದೆ. ಬೀಜ-ಗೊಬ್ಬರಕ್ಕಾಗಿ ಒಂದು ಎಕರೆಗೆ 25 ಸಾವಿರ ಖರ್ಚಾಗಿದೆ ಎಂದು ಬಸಪ್ಪ ಕುಂಟಿಗೇರಿ ಅಳಲು ತೋಡಿಕೊಂಡರು. ಪ್ರತಿಯೊಬ್ಬ ರೈತರು ಐದಾರು ಎಕರೆ ಕ್ಯಾರೇಟ್ ಬಿತ್ತನೆ ಮಾಡಿದ್ದು, ಬಳೆಹಾನಿಯಾಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ರೈತರು ಸಮಸ್ಯೆ ವಿವರಿಸಿದರು.
ನೇಸರಗಿ ಭಾಗದಲ್ಲಿಯೇ 295 ಹೆಕ್ಟೇರ್ ಕ್ಯಾರೇಟ್ ಬಿತ್ತನೆ ಮಾಡಲಾಗಿದೆ. ಇಳುವರಿ ಸಂಪೂರ್ಣ ಹಾಳಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ತಂಡದ ಮುಖ್ಯಸ್ಥರು ಹಾಗೂ ಸದಸ್ಯರು ಸ್ವತಃ ರೈತರೊಂದಿಗೆ ಚರ್ಚಿಸಿ, ಬೆಳೆಹಾನಿಯ ಕುರಿತು ಮಾಹಿತಿ ಸಂಗ್ರಹಿಸಿದರು.
ಇದಾದ ಬಳಿಕ ಮೀರಪ್ಪ ಹುಕ್ಕೇರಿ ಅವರ ಹನ್ನೆರಡು ಎಕರೆ ಸೋಯಾಬಿನ್ ಬೆಳೆಹಾನಿ ಪರಿಶೀಲಿಸಿದರು. ಮಳೆಕೊರತೆಯಿಂದ ಸಂಪೂರ್ಣ ಬೆಳೆ ಹಾನಿಯಾಗಿದೆ. ಸ್ಚಲ್ಪ ಮಳೆಯಾಗಿರುವುದರಿಂದ ಹಸಿರು ಕಾಣಿಸುತ್ತಿದೆ. ಆದರೆ ಇಳುವರಿ ಇಲ್ಲ ಎಂದು ರೈತ ಮಹಿಳೆ ಕಮಲವ್ವ ನಡಹಟ್ಟಿ ವಿವರಿಸಿದರು. ಚಚಡಿಯಲ್ಲಿ ವೀರಭದ್ರಪ್ಪ ಹೊಸಮನಿಯವರ ಹೊಲದಲ್ಲಿ ಸೂರ್ಯಕಾಂತಿ ಬೆಳೆಹಾನಿ ವೀಕ್ಷಿಸಿದರು. ಬರ ಅಧ್ಯಯನ ತಂಡದ ಮುಖ್ಯಸ್ಥರಾದ ಅಜಿತಕುಮಾರ್ ಸಾಹು ಅವರು, ಬೆಳೆವಿಮೆ ಪಾವತಿ, ಬೀಜ-ಗೊಬ್ಬರ, ಕೃಷಿ ಕೂಲಿಕಾರರ ಖರ್ಚು-ವೆಚ್ಚಗಳ ಬಗ್ಗೆ ಸ್ವತಃ ರೈತರಿಂದಲೇ ಮಾಹಿತಿಯನ್ನು ಪಡೆದುಕೊಂಡರು.