ಬೆಳಗಾವಿ ಅ. 3: ಬಿಹಾರ ಸರ್ಕಾರ ಜಾತಿ ಗಣತಿ ವರದಿ ಜಾರಿ ಮಾಡಿದ್ದು, ಅದೇ ರೀತಿ ಕರ್ನಾಟಕದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಮಾಡಿದರೆ ಒಳ್ಳೆಯದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಂದಿಲ್ಲಿ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು ವರ್ಷಗಳ ಹಿಂದೆಯೆ ಜಾತಿಗಣತಿ ಮುಗಿದು ವರದಿ ಸಿದ್ದವಾಗಿದೆ. ಅದರ ಕುರಿತು ಸಿಎಂ ನಿರ್ಧಾರ ಮಾಡಬೇಕು. ಜಾತಿ ಗಣತಿ ವರದಿ ಜಾರಿ ಮಾಡುವುದು ಒಳ್ಳೆಯದು. ಯಾವ ಸಮುದಾಯಕ್ಕೆ ಏನೇನು ಕಾರ್ಯಕ್ರಮ ಮಾಡಬೇಕು, ಅನುದಾನ ಕೊಡಬೇಕು ಎಂದು ಗೊತ್ತಾಗುತ್ತದೆ. ಸಾಮಾಜಿಕವಾಗಿ, ಶೈಕ್ಷಣಿಕ ಲೆಕ್ಕಾಚಾರದಲ್ಲಿ ಬಹಳ ಒಳ್ಳೆಯ ಬೆಳವಣಿಗೆ ನಮ್ಮಲ್ಲಿಯೂ ಆಗಬೇಕು ಅನ್ನೋದು ನಮ್ಮ ಆಸೆ ಎಂದು ತಿಳಿಸಿದರು.
ಕಳೆದ ಬಾರಿ ಚುನಾವಣೆ ವೇಳೆಗೆ ಮಾಡೋಕೆ ಆಗಲಿಲ್ಲ. ನಮ್ಮ ಸರ್ಕಾರದ ಹಂತದಲ್ಲಿ ಚರ್ಚೆ ಆಗುತ್ತಿದ್ದು ಆದಷ್ಟು ಬೇಗ ಸರ್ಕಾರ ಗಮನ ಹರಿಸಬೇಕು. ಜನಗಣತಿ ವರದಿಗೆ 200 ಕೋಟಿ ಖರ್ಚು ಮಾಡಿರಬೇಕು, ಆದಷ್ಟು ಬೇಗ ವರದಿ ಜಾರಿ ಆಗಬೇಕು ಎಂದರು.
ಶಿವಮೊಗ್ಗದಲ್ಲಿ ಘಟನೆ ಆಗಿರೋದು ನಿಜ, ಆದ್ರೆ ಎಲ್ಲೋ ಒಂದು ಮೂಲೆ ಭಾಗದಲ್ಲಿ, ಇಡೀ ಶಿವಮೊಗ್ಗಕ್ಕೆ ಸಂಬಂದಪಟ್ಟದ್ದಲ್ಲ. ಇದನ್ನು ಎಸ್‌ಪಿಯವರು ಹೇಳಿದ್ದಾರೆ, ನಿಷೇಧಾಜ್ಞೆ ಜಾರಿ ಮಾಡದಂತೆ ಆಗ್ರಹ ವಿಚಾರಕ್ಕೆ ಅದು ನಿಜ, ವ್ಯಾಪಾರಕ್ಕೆ ಸಮಸ್ಯೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಈ ರೀತಿ ಘಟನೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಹೇಳವರು ಹೇಳುತ್ತಾರೆ? ಅವರ ಕಾಲದಲ್ಲಿ ನೂರಕ್ಕೆ ನೂರರಷ್ಟು ಶಾಂತವಿತ್ತಾ? ಏನೂ ಆಗಿಲ್ವಾ? ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿಲ್ವಾ? ನ್ಯಾಯಾಲಯದಲ್ಲಿ ಯಾವ ಪ್ರಕರಣ ದಾಖಲಾಗಿಲ್ವಾ ಎಂದು ಪ್ರಶ್ನಿಸಿದರು.
ಕುರುಬ ಸಮಾಜ ಎಸ್ಟಿಗೆ ಸೇರಿಸುವ ವಿಚಾರಕ್ಕೆ ಶಿಫಾರಸ್ಸು ಮಾಡುವುದಷ್ಟೇ ರಾಜ್ಯ ಸರ್ಕಾರದ ಕೆಲಸ. ಅಂತಿಮವಾಗಿ ಇದನ್ನು ಅನುಷ್ಠಾನಕ್ಕೆ ತರುವುದು ಕೇಂದ್ರ ಸರ್ಕಾರದ ಕೆಲಸ ಎಂದ ಅವರು, ರಮೇಶ ಕತ್ತಿ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಅದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇವೆ. ವಿಧಾನಸಭೆ ಚುನಾವಣೆಯಂತೆ ಮುಂಚೆಯೇ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುತ್ತೇವೆ ಎಂದರು.
ಜೀವ ಬೆದರಿಕೆ ಪತ್ರ ಬಂದಿರುವ ಕುರಿತು ಈ ರೀತಿ ಪತ್ರಗಳು ಬರುತ್ತಿರುತ್ತವೆ. ಇದೇನು ಹೊಸದಲ್ಲ. ಯಾರೋ ಒಬ್ಬರು ಪತ್ರ ಬರೆದಿದ್ದಕ್ಕೆ ಜೀವ ಬೆದರಿಕೆ ಎನ್ನಲು ಬರುವುದಿಲ್ಲ. ಆದರೆ, ಸ್ವಾಮೀಜಿಗಳು, ಸಾಹಿತಿಗಳಿಗೆ ಪತ್ರ ಬಂದಿರುವುದನ್ನು ಸರ್ಕಾರ ಗಮನಿಸುತ್ತದೆ ಎಂದು ಹೇಳಿದರು.
