ಬೆಳಗಾವಿ ಸೆ. 13 : ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಆರಂಭವಾದಾಗಿನಿಂದಲೂ ಕೆಲವರು ತಮ್ಮ ಸ್ವಾರ್ಥ ಮತ್ತು ಅಸ್ತಿತ್ವಕ್ಕಾಗಿ ಸುಳ್ಳು ಹೇಳುತ್ತ “ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ, ಈಗಿರುವ ಮೀಸಲಾತಿ ಕೈತಪ್ಪುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕ ನಂತರವೂ, ಪಟ್ಟಿಗೆ ಅನುಗುಣವಾಗಿ ಮೀಸಲಾತಿ ಪಡೆಯಬಹುದು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಅವರಿಂದಿಲ್ಲಿ ಹೇಳಿದರು.
ನಗರದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿಯುವಿಕೆಯನ್ನು ಪರಿಗಣಿಸಿ, ಮೀಸಲಾತಿ ನೀಡಲಾಗುತ್ತದೆ. ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಮೀಸಲಾತಿ ಕೈತಪ್ಪದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದ ಅವರು ನಮ್ಮ ಹೋರಾಟ ನಿರಂತರವಾಗಿದ್ದು, ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
‘ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕ್ರೈಸ್ತರು, ಮುಸ್ಲಿಮರು ಮತ್ತು ಜೈನರ ಹೆಸರಿದೆ. ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕ ನಂತರವೂ, ಈ ಸಮುದಾಯದವರು ಮೀಸಲಾತಿ ಪಡೆಯುತ್ತಿದ್ದಾರೆ. ಹೀಗಿರುವಾಗ ಕೆಲ ಕುತಂತ್ರಿಗಳು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರವರ್ಗ 2ಎ ಮೀಸಲಾತಿಗಾಗಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ೦ಚಮಸಾಲಿ ಸಮುದಾಯದವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ, ಹೋರಾಟ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಜಾಮದಾರ ಅವರು, ‘ಸಾವಿರಾರು ವಾಹನಗಳು ಓಡಾಡುವ ರಾಷ್ಟ್ರೀಯ ಹೆದ್ದಾರಿಯ ಮದ್ಯದಲ್ಲಿ ಕುಳಿತುಕೊಂಡು ಇಷ್ಟಲಿಂಗ ಪೂಜೆ ಮಾಡುವುದನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲವೇ? ಇದನ್ನು ತಡೆಯಲು ಬಂದ ಪೊಲೀಸರ ಮೇಲೆ ದಬ್ಬಾಳಿಕೆ ನಡೆಸಿ, ನಿಮ್ಮ ವಿರುದ್ಧವೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುವುದು ಸರಿಯಲ್ಲ. ಬೇರೆ ಎಲ್ಲದರೂ ಲಿಂಗ ಪೂಜೆ ಮಾಡಿಕೊಳ್ಳಲಿ. ಬುದ್ದಿವಂತರಾಗಿರುವ ಸ್ವಾಮೀಜಿ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.
ಯಾವುದೇ ಸಮುದಾಯದವರು ಮೀಸಲಾತಿ ಕೇಳುವುದು, ಸರ್ಕಾರದ ಮೇಲೆ ಒತ್ತಡ ತರುವುದು ತಪ್ಪಲ್ಲ. ಅದನ್ನು ನಾವೂ ವಿರೋಧಿಸುವುದಿಲ್ಲ. ಆದರೆ. ಮೀಸಲಾತಿ ಪಡೆಯುವ ಧಾವಂತದಲ್ಲಿ ಧರ್ಮವನ್ನು ಅಧರ್ಮಗೊಳಿಸುವ ಕೆಲಸ ಮಾಡಬಾರದು’ ಎಂದು ಹೇಳಿದರು