ಬೆಳಗಾವಿ : ಪ್ಲಾಟ್ ತೋರಿಸುವುದಾಗಿ ನಂಬಿಸಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿಕೊಂಡು ಹೋಗಿ ಅಕ್ರಮ ಬಂಧನದಲ್ಲಿಟ್ಟು, ಜೀವ ಬೆದರಿಕೆ ಹಾಕಿ, ಬಿಡುಗಡೆಗಾಗಿ ಹಣದ ಬೇಡಿಕೆ ಇಟ್ಟಿದ್ದ ಕುಖ್ಯಾತ ರೌಡಿಯನ್ನು ಬಂಧಿಸುವಲ್ಲಿ ಬೆಳಗಾವಿಯ ಕ್ಯಾಂಪ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಆರೋಪಿಯಿಂದ ಕಾರ್, ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಸೆಪ್ಟಂಬರ 1 ರಂದು ಪ್ಲಾಟ ತೋರಿಸುವದಾಗಿ ರಿಯಲ್ ಎಸ್ಟೇಟ ಉದ್ಯಮಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆಯೊಡ್ಡಿದ್ದ ಬೆಳಗಾವಿ ಮೂಲದ ವಿಶಾಲಸಿಂಗ ಚೌಹಾಣ ( 25) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿತನ ವಿರುದ್ಧ ಈಗಾಗಲೇ ನಗರದ ವಿವಿಧ ಪೋಲೀಸ ಠಾಣೆಗಳಲ್ಲಿ ಒಟ್ಟು10 ಪ್ರಕರಣಗಳು ದಾಖಲಾಗಿವೆ. ಗೋವಾ ರಾಜ್ಯದ ಮಾಪಸಾ, ಬಿಚೋಲಿ, ಸಾಕಳಿ ಮತ್ತು ಅಂಜುನಾ ಸ್ಥಳಗಳಲ್ಲಿ ಸರಗಳ್ಳತನ ಮಾಡಿರುವ ಬಗ್ಗೆ ತಿಳಿದುಬಂದಿದೆ.
ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ತನಿಖೆ ಕೈಗೊಂಡಿದ್ದ ಬೆಳಗಾವಿ ನಗರ ಪೊಲೀಸರು ಸಿಸಿಬಿ ಪಿಐ ನಂದೀಶ್ವರ ಕುಂಬಾರ ಹಾಗೂ ಕ್ಯಾಂಪ್ ಠಾಣೆ ಪಿಎಸ್ಐ ಆಲ್ತಾಫ್ ಮುಲ್ಲಾ ನೇತೃತ್ವದಲ್ಲಿ ಪ್ರಕರಣದ ವಿರುದ್ಧ ತನಿಖೆ ಕೈಗೊಂಡಿದ್ದರು.
ಆರೋಪಿತನನ್ನು ಬಂಧಿಸುವಲ್ಲಿ ಯಶ್ವಸಿಯಾದ ತಂಡಕ್ಕೆ ನಗರ ಪೊಲೀಸ್ ಆಯುಕ್ತರಾದ ಶಿದ್ದರಾಮಪ್ಪ ಹಾಗೂ ಹಿರಿಯ ಅಧಿಕಾರಿಗಳು ಶ್ಲಾಘಿಸಿ, ಅಭಿನಂದಿಸಿದ್ದಾರೆ.