ಬೆಳಗಾವಿ:  ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯಲ್ಲಿ ಮದುವೆ ಸಮಾರಂಭದಲ್ಲಿ ಕಲುಷಿತ ಆಹಾರ ಸೇವಿಸಿದ ವ್ಯಕ್ತಿಯೊಬ್ಬರಿಗೆ ದೃಷ್ಟಿ ಹೀನ ಉಂಟಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದ ಬಾಬಾಸಾಬ್‌ ಕುತುಮುದ್ದೀನ್ ಬೇಗ್ (37) ದೃಷ್ಟಿ ಕಳೆದುಕೊಂಡವರು. ಮದುವೆಯ ಊಟ ಸವಿದ ಬಳಿಕ ವಾಂತಿ- ಭೇದಿ ಉಂಟಾದಾಗ ಚಿಕ್ಕೋಡಿ ತಾಲ್ಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಇದ್ದಕ್ಕಿದ್ದಂತೆ ಅವರ ಕಣ್ಣುಗಳು ಮಂಜಾದವು’ ಎಂದು ಬಾಬಾಸಾಬ್ ಅವರ ಪತ್ನಿ ರುಕ್ಸಾನಾ ತಿಳಿಸಿದ್ದಾರೆ.

ವಿಪರೀತ ವಾಂತಿ-ಭೇದಿಯಿಂದ ದೇಹದಲ್ಲಿ ನಿರ್ಜಲೀಕರಣ ಆಗಿದೆ. ಇದರಿಂದ ರಕ್ತ ಹೆಪ್ಪುಗಟ್ಟಿ ನೇತ್ರದ ನರಗಳು ಕ್ಷೀಣಿಸಿರಬಹುದು. ಸದ್ಯ ಅವರಿಗೆ ಕಣ್ಣು ಕಾಣುತ್ತಿಲ್ಲ. ಪೂರ್ಣಪ್ರಮಾಣದಲ್ಲಿ ತಪಾಸಣೆ ನಡೆಸಿದ ಬಳಿಕ ನಿಖರ ಕಾರಣ ತಿಳಿಯಲಿದೆ ” ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

162 ಜನರ ಆರೋಗ್ಯ ಸ್ಥಿರ: ಕಲುಷಿತ ಆಹಾರ ಸೇವಿಸಿ ವಾಂತಿ-ಭೇದಿಯಿಂದ ಬಳಲಿದ 162 ಜನರು ಚಿಕ್ಕೋಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ. ವಿವಿಧ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗಿದ್ದ 79 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ.