ಬೆಳಗಾವಿ, ಜು 26 :ಬೆಳಗಾವಿ ಸಂಸದೆ ಶ್ರೀಮತಿ ಮಂಗಲಾ ಸುರೇಶ ಅಂಗಡಿ ಅವರು ಲೋಕಸಭೆಯಲ್ಲಿಂದು ಬೆಳಗಾವಿಯಿಂದ ವಿವಿಧ ಸ್ಥಳಗಳಿಗೆ ವಂದೇ ಭಾರತ ಮತ್ತು ಇಂಟರ್ಸಿಟಿ ರೈಲುಗಳನ್ನು ಪ್ರಾರಂಭಿಸುವ ಕುರಿತು ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಪ್ರಶ್ನಿಸಿದರು.
ಸದ್ಯಕ್ಕೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಂದೇ ಭಾರತ ರೈಲು ಪ್ರಾರಂಭಿಸಲಾಗಿದೆ. ಆದರೆ ಬೆಳಗಾವಿಯಿಂದ ಬೆಂಗಳೂರು-ಬೆಳಗಾವಿ “ವಂದೇ ಭಾರತ್” ಸೆಮಿ ಹೈಸ್ಪೀಡ್ ರೈಲನ್ನು ಪ್ರಾರಂಭಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಯಾವ ಹಂತದಲ್ಲಿವೆ ಅಲ್ಲದೇ ಬೆಳಗಾವಿಯಿಂದ ಪುಣೆಗೆ ಇಂಟರ್ಸಿಟಿ ಅಥವಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಪ್ರಾರಂಭಿಸಲು ಯಾವ ಯೋಜನೆ ರೂಪಿಸಲಾಗಿದೆ ಎಂದ ಅವರು, ಬೆಳಗಾವಿ ಹಾಗೂ ಆ ಭಾಗದ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾಗಿದೆ. ಆದ್ದರಿಂದ ಈ ರೈಲುಗಳನ್ನು ಶೀಘ್ರವೇ ಪ್ರಾರಂಭಿಸಬೇಕೆಂದು ಕೋರಿಸಿದರು.
ರೈಲ್ವೆ, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಉತ್ತರಿಸಿ, ಈಗಾಗಲೇ ಬೆಳಗಾವಿ ಮೂಲಕ15 ಜೋಡಿ ರೈಲುಗಳು ಬೆಳಗಾವಿ-ಬೆಂಗಳೂರು ವಿಭಾಗದ ಪ್ರಯಾಣಿಕರಿಗೆ ಸೇವೆಯನ್ನು ಕಲ್ಪಿಸುತ್ತಿದ್ದು, 16 ಜೋಡಿ ರೈಲುಗಳು ಬೆಳಗಾವಿ-ಪುಣೆ ವಿಭಾಗದಲ್ಲಿ ಸೇವೆ ನೀಡುತ್ತಿವೆ. ಅಲ್ಲದೆ, ವಂದೇ ಭಾರತ್ ರೈಲುಗಳನ್ನು ಹಂತಹಂತವಾಗಿ ಪರಿಚಯಿಸಲಾಗುತ್ತಿದ್ದು, ಕಾರ್ಯಾಚರಣೆಯ ಕಾರ್ಯಸಾಧ್ಯತೆ, ಜನದಟ್ಟಣೆಯ ಬೇಡಿಕೆಗೆ ಅನುಸಾರವಾಗಿ ಮತ್ತು ಸಂಪನ್ಮೂಲಗಳ ಲಭ್ಯತೆ ಇತ್ಯಾದಿಗಳಿಗೆ ನೋಡಿಕೊಂಡು ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.