ಬೆಳಗಾವಿ: ವಿವಿಧ ಕಂಪನಿಗಳ ಹೆಸರಿನಲ್ಲಿ ರಸಾಯನಿಕ ಮಿಶ್ರಿತ‌ ಮದ್ಯ ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಳಗಾವಿ ಸಿಸಿಬಿ ಪೊಲೀಸರು ಬೇಧಿಸಿದ್ದು, 4 ಲಕ್ಷ ರೂ. ಮೌಲ್ಯದ ಮದ್ಯ ಮತ್ತು ವಾಹನ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

 ಪಿಐ ಅಲ್ತಾಫ್ ಮುಲ್ಲಾ ನೇತೃತ್ವದ ತಂಡ ಸದಾಶಿವ ನಗರದ ವಿರೂಪಾಕ್ಷಿ ರೆಸಿಡೆನ್ಸಿ ಮೇಲೆ ದಾಳಿ ನಡೆಸಿ,  ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳ್ಪಡಿಸಿದಾಗ ವಿವಿಧ ಬ್ರಾಂಡ್‌ನ ಖಾಲಿ ಮದ್ಯ ಬಾಟಲಗಳನ್ನು ಸಂಗ್ರಹಿಸಿಕೊಂಡು ಅವುಗಳಲ್ಲಿ ಗೋವಾ ಹಾಗೂ ಕರ್ನಾಟಕದಲ್ಲಿ ತಯಾರಾದ ಕಡಿಮೆ ಬೆಲೆಯ ಮದ್ಯದಲ್ಲಿ ರಾಸಾಯನಿಕ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿರುವದು ಕಂಡು ಬಂದಿದೆ.

ವಿವಿಧ ಬ್ರಾಂಡ್‌ನ ಲೇಬಲ್‌ಗಳನ್ನು ಅಂಟಿಸಿ, ನಕಲಿ ಮುಚ್ಚಳಗಳನ್ನು ಹಾಕಿ ಪ್ಯಾಕ್ ಮಾಡಿ, ಮೂಲ ಕಂಪನಿಯವು ಎಂಬಂತೆ ಬಿಂಬಿಸುತ್ತಿದ್ದರು. ಸರ್ಕಾರದ ಅನುಮತಿ ಲೈಸನ್ಸ್ ಇಲ್ಲದೇ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಎಸ್. ಎನ್.ಸಿದ್ದರಾಮಪ್ಪ ಪತ್ರಕರ್ತರೊಂದಿಗೆ ಮಾತನಾಡುತ್ತ ತಿಳಿಸಿದರು.

ಬಂಧಿತರಿಂದ ಒಟ್ಟು 4 ಲಕ್ಷ ಮೌಲ್ಯದ 750 ಎಮ್‌ಎಲ್ ನ ವಿಸ್ಕಿ, ರಮ್, ಓಡ್ಕಾ, ರಾಯಲ್ ಸ್ಟಾಗ್ ಮದ್ಯದ 439 ಬಾಟಲಿಗಳು. 375 ಎಂಎಲ್ ನ ಓರಿಜಿನಲ್ ಚಾಯ್ಸ್ ಮದ್ಯದ 20 ಬಾಟಲಿಗಳು. 180 ಎಂಎಲ್ ನ ಓಲ್ಡ್ ಟ್ಯಾವರ್ನ್ ಮದ್ಯದ 2 ಟೆಟ್ರಾ‌ ಪ್ಯಾಕ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅದೇ ರೀತಿ ಕೃತ್ಯಕ್ಕೆ ಬಳಸಿದ ಒಂದು ಇಂಡಿಕಾ ಕಾರು, 4 ಮೊಬೈಲ್, 17,500 ರೂ‌. ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇನ್ನಿಬ್ಬರು ಪರಾರಿಯಾಗಿರುವ ಜಾವೇದ್ ಬೇಪಾರಿ, ನಾಗೇಶ ಎಂಬುವವರ ಪತ್ತೆಗೆ ಜಾಲ ಬೀಸಲಾಗಿದೆ ಎಂದ ಅವರು, ಆರೋಪಿಗಳು ನಗರದಲ್ಲಿ ಯಾವ ಅಂಗಡಿಗಳಿಗೆ ನಕಲಿ ಮದ್ಯ ಪೂರೈಸುತ್ತಿದ್ದರು ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದರು.