ಯಾದಗಿರಿ: ಕಾರು ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 9 ಜನ ಮೃತಪಟ್ಟ ಘಟನೆ ಸುರಪುರ ತಾಲ್ಲೂಕು ಶಾಂತಪುರ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದೆ. ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ನಡೆದಿದೆ. ಬೆಂಕಿಯ ಕೆನ್ನಾಲಿಗೆ ಸಜೀವ ದಹನಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಬಸ್ ಮತ್ತು ಕಾರು ಸುಟ್ಟು ಹೋಗಿದೆ.
ಕಾರಿನಲ್ಲಿದ್ದವರು ಲಿಂಗಸುಗೂರು ಮೂಲದವರು ಎಂಬ ಮಾಹಿತಿ ಸಿಕ್ಕಿದೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಬಂದಿದ್ದರು.
ಕಾರು ರಾಯಚೂರು ಜಿಲ್ಲೆ ಸಿರವಾರ ಮೂಲದ ಕೃಷ್ಣನಾಯಕ ಎಂಬವರಿಗೆ ಸೇರಿದೆ.
ಕೃಷ್ಣನಾಯಕ (52), ಅನಂತ ಕಲಾಕೃಷ್ಣ (45), ಶರಣಪ್ಪ (36), ನಿಸರ್ಗಾ ಶರಣಪ್ಪ(30), ಸಿದ್ದಾರ್ಥ ಶರಣಪ್ಪ(5), ಶಶಿಕಲಾ (30), ಅದ್ವಿಕಾ(5),ಚಂದನಾ(8) ಹಾಗೂ ಒಂದೂವರೆ ವರ್ಷದ ಶ್ರೀನಿಧಿ ಮೃತಪಟ್ಟಿದ್ದಾರೆ. ಪಿ ಭೀಕರ ಅವಘಡದಲ್ಲಿ ಶಶಿಕಲಾ ಅವರ ಪುತ್ರ ವಿರಾಟ್ ಎಂಬ ಒಬ್ಬನೇ ಬದುಕಿ ಉಳಿದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಸಿರವಾರ ಪಟ್ಟಣ ಪಂಚಾಯಿತಿ ಸದಸ್ಯರಾದ ಕೃಷ್ಣನಾಯಕ ಅವರು ಕುಟುಂಬ ಸಮೇತರಾಗಿ ಸುರಪುರದ ವೇಣುಗೋಪಾಲ ಸ್ವಾಮಿಯ ದರ್ಶನಕ್ಕೆ ಕಾರಿನಲ್ಲಿ ಆಗಮಿಸಿದ್ದರು. ದೇವರ ದರ್ಶನ ಮುಗಿಸಿ ಸಿರವಾರದತ್ತ ತೆರಳುತ್ತಿದ್ದರು.
ಶಾಂತಪುರ ಕ್ರಾಸ್ ಬಳಿ ರಸ್ತೆಯಲ್ಲಿ ಕಾರು ಚಲಾಯಿಸುತ್ತಾ ಇದ್ದಾಗ ಕೃಷ್ಣ ಅವರು ಇನ್ನೊಂದು ವಾಹನವನ್ನು ಹಿಂದಿಕ್ಕುವಾಗ ಬೆಂಗಳೂರಿನಿಂದ ಕಲಬುರ್ಗಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಕಾರು ಮತ್ತು ಬಸ್ಸು ನಡುವೆ ಡಿಕ್ಕಿ ಸಂಭವಿಸಿದ್ದರಿಂದ ಬಸ್ಸಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಕಾರಿಗೂ ತಗಲಿದೆ. ಕೃಷ್ಣ ನಾಯಕ ಶರಣಪ್ಪ ಮತ್ತು ಮಗು ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಇತರರು ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡು ಮತ್ತು ಬೆಂಕಿಗೆ ಅಹುತಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಬಸ್ಸಿನಲ್ಲಿ ಇದ್ದ ಸುಮಾರು 20 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.
ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳೀಯರು ಸಹ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.
ಭೀಕರ ಅಪಘಾತ: 9 ಜನರ ದುರ್ಮರಣ
