ಬೆಳಗಾವಿ: ಕುಂದಾ ನಗರಿ ಬೆಳಗಾವಿಯಲ್ಲಿ ಕಳೆದ 10 ದಿನಗಳಿಂದ ಸಾರ್ವಜನಿಕ ಮಂಡಳಿಗಳು ಹಾಗೂ ಮನೆ
ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶನಿವಾರ ಗಣೇಶನಿಗೆ ಅಂತಿಮ ವಿದಾಯ ಹೇಳಲು ಸಜ್ಜಾಗಿದ್ದಾರೆ. ಇನ್ನು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಬೆಳಗಾವಿ ನಗರದಲ್ಲಿ 400ಕ್ಕೂ ಅಧಿಕ ಸಾರ್ವಜನಿಕ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಬೆಳಗಾವಿ ಅಷ್ಟೇ
ಅಲ್ಲದೇ ಹೊರ ರಾಜ್ಯದಿಂದಲೂ ಗಣೇಶನ ದರ್ಶನಕ್ಕೆ
ಲಕ್ಷಾಂತರ ಜನರು ಬರುತ್ತಾರೆ.11 ದಿನಗಳ ಭಕ್ತಿಯಿಂದ ಧಾರ್ಮಿಕ ವಿಧಿ ಕೈಗೊಂಡ ಭಕ್ತರು, ಶನಿವಾರ ಮೋದಕ ಪ್ರಿಯನನ್ನು ಬೀಳ್ಕೊಡಲಿದ್ದಾರೆ.
ಭವ್ಯ ಮೆರವಣಿಗೆ: ಬೆಳಗಾವಿಯ ಹುತಾತ್ಮ ಚೌಕ್ನಲ್ಲಿ ಸಂಜೆ 4ಕ್ಕೆ ಆರಂಭಗೊಳ್ಳುವ ಸಾರ್ವಜನಿಕ ಮೂರ್ತಿಗಳ ಭವ್ಯ ಮೆರವಣಿಗೆ ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೇಖೂಟ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ್ ಗಲ್ಲಿ ರಸ್ತೆ, ಟಿಳಕ ಚೌಕ್, ಹೆಮು ಕಲಾನಿ ಚೌಕ್, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ ಮಾರ್ಗವಾಗಿ ಸಾಗಿ, ಕಪಿಲೇಶ್ವರ ದೇವಸ್ಥಾನ ಬಳಿಯ ಹೊಂಡಕ್ಕೆ ಬಂದು ತಲುಪಲಿದೆ.
ಗಮನ ಸೆಳೆಯಲಿವೆ ಸಾಂಪ್ರದಾಯಿಕ ಕಲಾತಂಡಗಳು:
ಮೆರವಣಿಗೆ ವೇಳೆ ಸಾಂಪ್ರದಾಯಿಕ ಕಲಾತಂಡಗಳ ಆಕರ್ಷಣೆ ಇರಲಿದೆ. ಡೊಳ್ಳು ಪತಕ್, ಝಾಂಜ್ ಪತಕ್, ಧ್ವಜ ಪತಕ್ ಸೇರಿ ಮತ್ತಿತರ ವಾದ್ಯಗಳು ನೋಡುಗರನ್ನು ಸೆಳೆಯುತ್ತವೆ. ಈ ಬಾರಿ 3 ಸಾವಿರಕ್ಕೂ ಅಧಿಕ ಕಲಾವಿದರು ತಮ್ಮ ಅದ್ಭುತ ಕಲೆಯನ್ನು ಪ್ರದರ್ಶಿಸಲಿದ್ದಾರೆ. ಮಹಿಳಾ ಮತ್ತು ಪುರುಷ ಕಲಾವಿದರ ಜೊತೆಗೆ ಚಿಕ್ಕ ಮಕ್ಕಳು ಕೂಡ ತಮ್ಮ ಕಲೆ ಪ್ರಸ್ತುತ ಪಡಿಸಲಿದ್ದಾರೆ. ಈ ವೇಳೆ ವಿವಿಧ ತಂಡಗಳು ಒಂದೇ ಬಗೆಯ ಸಾಂಪ್ರದಾಯಿಕ ವೇಷಭೂಷಣ ತೊಟ್ಟು ಮಿಂಚಲಿದ್ದಾರೆ.
ಖಾಕಿ ಸಜ್ಜು:
ವಿಸರ್ಜನಾ ಮೆರವಣಿಗೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. 500 ಪೊಲೀಸ ಅಧಿಕಾರಿಗಳು, 3000 ಸಿಬ್ಬಂದಿ, 10 ಕೆಎಸ್ಆರ್ಪಿ, 1 ಕ್ಷಿಪ್ರ ಕಾರ್ಯಾಚರಣೆ ಪಡೆ, 9 ಕೇಂದ್ರ ಮೀಸಲು ಪಡೆಯ ತುಕಡಿ, ಹೋಮ್ ಗಾರ್ಡ್ಸ್ ಸೇರಿದಂತೆ 4 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಬಂದೋಬಸ್ತಿನಲ್ಲಿರುತ್ತಾರೆ. ಅಲ್ಲದೇ 700 ಸಿಸಿಟಿವಿ ಕ್ಯಾಮರಾ, 14 ಡ್ರೋಣ್ಗಳ ಮೂಲಕವೂ ಮೆರವಣಿಗೆ ಮೇಲೆ ನಿಗಾ ಇಡಲಾಗುತ್ತಿದೆ.
ಶಾಂತಿಯುತವಾಗಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ನಡೆಯುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಕೈಗೊಂಡಿದ್ದೇವೆ. ಬೆಳಗಾವಿ ನಗರ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ 3 ಸಾವಿರಕ್ಕೂ ಅಧಿಕ ಪೊಲೀಸರು ಕರ್ತವ್ಯದಲ್ಲಿ ಇರಲಿದ್ದಾರೆ. ಇಡೀ ನಗರವು ಪೊಲೀಸ್ ಕಣ್ಗಾವಲು ಇರಲಿದೆ. ಹಾಗಾಗಿ, ಯಾರೂ ಕೂಡ ಶಾಂತಿ ಕದಡಲು ಯತ್ನಿಸಬಾರದು. ಒಂದು ವೇಳೆ ಆ ರೀತಿ ಯತ್ನಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ನಿಶ್ಚಿತ.
– ಭೂಷಣ ಗುಲಾಬರಾವ್ ಬೊರಸೆ ನಗರ ಪೊಲೀಸ್ ಆಯುಕ್ತ
ಬೆಳಗಾವಿ ನಗರದ ಶಹಾಪುರದ ಕಪಿಲೇಶ್ವರ ದೇವಸ್ಥಾನದ ಹೊಸ ಹೊಂಡ, ಹಳೆಯ ಹೊಂಡ, ಜಕ್ಕೇರಿ ಹೊಂಡ, ಕೋಟೆ ಕೆರೆ, ಕಣಬರ್ಗಿ ಕೆರೆ, ಅನಗೋಳದ ಲಾಲ್ ತಾಲಾಬ್, ಮಜಗಾವಿ ಕೆರೆ, ವಡಗಾವಿಯ ನಾಜರ್ಕ್ಯಾಂಪ್ ಸೇರಿ ವಿವಿಧೆಡೆ ಕಡೆ ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ನೀರಲ್ಲಿ ಬೃಹದಾಕಾರದ ಮೂರ್ತಿಗಳನ್ನು ಮುಳುಗಿಸಲು ಕ್ರೇನ್ ಬಳಸಲಾಗುತ್ತಿದೆ. ಅಲ್ಲದೇ ಈಜುಪಟುಗಳನ್ನು ಕೂಡ ನಿಯೋಜಿಸಿದ್ದೇವೆ. ಧರ್ಮವೀರ ಸಂಭಾಜಿ ವೃತ್ತದ ಬಳಿ ವೀಕ್ಷಕರ ಗ್ಯಾಲರಿಯನ್ನೂ ನಿರ್ಮಿಸಲಾಗಿದೆ. ಯಾವುದೇ ರೀತಿ ತೊಂದರೆ ಆಗದಂತೆ ಎಲ್ಲ ವ್ಯವಸ್ಥೆ ಕೈಗೊಂಡಿದ್ದೇವೆ.
-ಶುಭ ಭಿ., ಆಯುಕ್ತೆ, ಮಹಾನಗರ ಪಾಲಿಕೆ ಬೆಳಗಾವಿ