ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ ವರದಿಯೇ ಅಂತಿಮ. ಒಂದು ವೇಳೆ ಆ ವರದಿಗೆ ಅಪಸ್ವರ ಎತ್ತಿದರೆ ಯಥಾಸ್ಥಿತಿ ಮುಂದುವರಿಯುವುದು ಕರ್ನಾಟಕದ ಕೊನೆಯ ನಿಲುವು ಆಗಿದೆ ಎಂದು ಗಡಿ ಉಸ್ತುವಾರಿ ಸಚಿವರೂ ಆಗಿರುವ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ ಹೇಳಿದರು.
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಗಡಿಭಾಗದ ಕನ್ನಡಪರ ಸಂಘಟನೆಗಳ ಮುಖಂಡರ ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಹಾಜನ್ ವರದಿ ಇಲ್ಲವೇ ಯಥಾಸ್ಥಿತಿ ಕರ್ನಾಟಕ ಮತ್ತು ಕನ್ನಡಿಗರ ಕೊನೆಯ ನಿಲುವು ಆಗಿದೆ.
ಸದ್ಯ ಯಾವುದೇ ಗಡಿ ವಿವಾದ ಉಳಿದಿಲ್ಲ. ಇಲ್ಲದ ವಿವಾದ ಸೃಷ್ಟಿಸುವ ಪ್ರಯತ್ನ ನಡೆದಿದೆ. ಅನ್ಯಭಾಷಿಕರಿಗೆ ಕರ್ನಾಟಕದಲ್ಲಿ ಎಲ್ಲ ಗೌರವ, ಅನುಕೂಲ ನೀಡಲಾಗುತ್ತಿದೆ. ಎಲ್ಲಿಯೂ ಯಾವುದೇ ತಕರಾರು ಇಲ್ಲ‌. ಇಂಥ ಸಂದರ್ಭದಲ್ಲಿ ಮಹಾರಾಷ್ಟ್ರ 14 ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ಗೆ ಹೋಗಿದೆ. ಆದರೆ, ಈವರೆಗೂ ಅದರ ಬಗ್ಗೆ ಚರ್ಚೆ, ವಿಚಾರಣೆಯೇ ಆಗಿಲ್ಲ. ಹಾಗಾಗಿ, ಕನ್ನಡಿಗರು ಆತಂಕಪಡುವ ಅಗತ್ಯವಿಲ್ಲ. ಸಾಂವಿಧಾನಿಕ ವಿಷಯವಾಗಿರುವುದರಿಂದ‌ ಅದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಬಗ್ಗೆಯೇ ಇದುವರೆಗೆ ನಿರ್ಧಾರವಾಗಿಲ್ಲ.
ಒಕ್ಕೂಟ ವ್ಯವಸ್ಥೆಯಲ್ಲಿ ಅನವಶ್ಯಕ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.

ಭಾಷಾ ವಿವಾದವೂ ಮಹಾರಾಷ್ಟ್ರದಲ್ಲಿ ಚುನಾವಣಾ ವಿಷಯವಾಗಿದೆ. ಆದ್ದರಿಂದ ಈ ಕುರಿತು ಆತಂಕ
ಪಡಬಾರದು. ದೇಶದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಿ ಮಹಾಜನ ಆಯೋಗ ರಚನೆಗೆ ಕರ್ನಾಟಕ ಸರಕಾರ ಒಪ್ಪಿಕೊಂಡಿದೆ. ಮಹಾಜನ‌ ವರದಿಯೇ ಗಡಿವಿವಾದಕ್ಕೆ ಪರಿಹಾರವಾಗಿದೆ ಎಂಬುದು ನಮ್ಮ ನಿಲುವು. ಇಲ್ಲದಿದ್ದರೆ ಯಥಾಸ್ಥಿತಿ‌ ಮುಂದುವರಿಯಬೇಕು ಎಂದರು.
ಗೋವಾ ವಿಮೋಚನೆಯಲ್ಲಿ ಕರ್ನಾಟಕ ಕೊಡುಗೆ ಮರೆಯಬೇಡಿ:
ಮಹದಾಯಿ ಯೋಜನೆ ವಿಚಾರದಲ್ಲಿ ಅನುಮತಿ ನೀಡುವಂತೆ ವನ್ಯಜೀವಿ ಮಂಡಳಿಗೆ ಈಗಾಗಲೇ ಅರಣ್ಯ ಇಲಾಖೆ ಶಿಫಾರಸ್ಸು ಮಾಡಿದೆ. ಅದನ್ನು ಮಂಡಳಿ ಒಪ್ಪಿ, ನಮಗೆ ಅನುಮತಿ ನೀಡಬೇಕು. ಆದರೆ, ವಿನಾಕಾರಣ ವಿಳಂಬ‌ ಮಾಡುತ್ತಿದ್ದಾರೆ. ಹಾಗಾಗಿ, ಪ್ರಧಾನಿ ಮೋದಿ, ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ ಅವರಿಗೆ ನಾನು ಆಗ್ರಹಿಸುತ್ತೇನೆ. ಅನವಶ್ಯಕವಾಗಿ ಗೊಂದಲ ಸೃಷ್ಟಿಸಬೇಡಿ. ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ. ಯಾವ ಕಾರಣಕ್ಕೆ ನಮಗೆ ಅನ್ಯಾಯ ಮಾಡುತ್ತಿದ್ದಿರಿ. ಗೋವಾದ ಯೋಜನೆಗಳು ಬಂದಾಗ ನಾವು ಸಹಕರಿಸಿಲ್ಲವೇ..? ಹಲವಾರು ಸಂದರ್ಭದಲ್ಲಿ ಗೋವಾಗೆ ಬೆಂಬಲ, ಬಲ ನೀಡಿದ್ದೇವೆ. ಗೋವಾ ವಿಮೋಚನೆ ಸಂದರ್ಭದಲ್ಲೂ ಕರ್ನಾಟಕದ ಕೊಡುಗೆಯನ್ನು ಗೋವಾ ಮತ್ತು ದೇಶದ ಜನತೆ ಮರೆಯಬಾರದು ಎಂದು ಎಚ್ಚರಿಸಿದರು.
ಗೋವಾ ಸಿಎಂ ಹೇಳಿಕೆಗೆ ಕೇಂದ್ರ ಸ್ಪಷ್ಟನೆ ನೀಡಲಿ:
ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬಂದರೆ ಎರಡೂ ರಾಜ್ಯದ ಮುಖ್ಯಮಂತ್ರಿಗಳನ್ನು ಕರೆದು ಮಹದಾಯಿ ಸಮಸ್ಯೆ ಬಗೆಹರಿಸುತ್ತೇನೆ‌ ಅಂತಾ ಪ್ರಧಾನಿ ಮೋದಿ ಹೇಳಿದ್ದರು. ಅಲ್ಲದೇ ರಾಜ್ಯದ ಬಿಜೆಪಿ ನಾಯಕರು ಗೋವಾ ಮುಖ್ಯಮಂತ್ರಿ ಪತ್ರ ತೆಗೆದುಕೊಂಡು ಬಂದು ಪ್ರಚಾರ ಮಾಡಿದರು. ಈಗ ಕೇಂದ್ರ ಯಾಕೆ ಅನುಮತಿ ನೀಡುತ್ತಿಲ್ಲ. ನಮ್ಮ ಸಂಸದರು ಏನು ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ನಾವು ಅನುಮತಿ ನೀಡುವುದಿಲ್ಲ ಅಂತಾ ಭೂಪೇಂದ್ರ ಯಾದವ ಹೇಳಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ತಕ್ಷಣ ಸ್ಪಷ್ಟನೆ, ವಿವರಣೆ ನೀಡಬೇಕು. ಅಲ್ಲದೇ ನಮ್ಮ ಡಿಸಿಎಂ ಡಿ.ಕೆ.ಶಿವಕುಮಾರ ಹೋದಾಗ ಒಂದು ರೀತಿ ಹೇಳುವುದು ಇದು ಸರಿಯಲ್ಲ. ಕರ್ನಾಟಕ ಎಂಪಿಗಳು ಸಂಸತ್ತಿನಲ್ಲಿ ಒಟ್ಟಾಗಿ ಗೋವಾ ಸರ್ಕಾರದ ಮಾತಿಗೆ ಕೇಂದ್ರ ಸರ್ಕಾರದ ಸ್ಪಷ್ಟನೆ ನೀಡುವಂತೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.