ಬೆಳಗಾವಿ,: ವೈದ್ಯೋ ನಾರಾಯಣ ಹರಿಃ’ ಎಂದು ವೈದ್ಯರನ್ನು ಪುಜಿಸಲಾಗುತ್ತದೆ. ಆಧುನಿಕತೆ ಬೆಳೆದಂತೆ ಅನೇಕ ರೋಗಗಳು ಹುಟ್ಟಿಕೊಳ್ಳುತ್ತಿವೆ. ನಿತ್ಯ ರೋಗಿಗಳ ಸೇವೆಯ ಕಾಯಕದಲ್ಲಿ ತೊಡಗಿರುವ ವೈದರ ಸೇವೆ, ನಿತ್ಯ ಸ್ಮರಣಿಯ.
ಆಧುನಿಕತೆ ಬೆಳೆದಂತೆ ಹಾಗೂ ವೈದ್ಯ ವಿಜ್ಞಾನ ಮುಂದುವರೆದಂತೆ ರೋಗ ಮತ್ತು ರೋಗಿಗಳ ಸಂಖ್ಯೆಯೂ ಅಧಿಕಗೊಂಡಿದೆ. ಮೊದಲೆಲ್ಲಾ ಊಟ ಬಲ್ಲವನಿಗೆ ರೋಗವಿಲ್ಲ. ರೋಗವಿಲ್ಲದವನು ಆರೋಗ್ಯವಂತ ಎನ್ನಲಾಗುತ್ತಿತ್ತು. ಈಗ ಆರೋಗ್ಯವೆಂದರೆ ರೋಗವಿಲ್ಲದವನು ಎಂಬರ್ಥವಲ್ಲ. ಬೆಳಗಾಗೆದ್ದು ಉಲ್ಲಸಿತನಾಗಿ ಇದ್ದು, ಯಾವುದೇ ತೊಂದರೆಯಿಲ್ಲದೇ ನಿತ್ಯ ಕಾಯಕದಲ್ಲಿ ತೊಡಗಿಕೊಂಡು ನಗುಮೊದಿಂದ ಖುಷಿಯಾಗಿ ಇರುತ್ತಾನೆಯೋ ಅವನೇ ನಿಜವಾದ ಆರೋಗ್ಯವಂತ ವ್ಯಕ್ತಿ. ಏಕೆಂದರೆ ಆಧುನಿಕತೆಯ ಜಂಜಾಟದಲ್ಲಿರುವ ಅತ್ಯಧಿಕ ಜನರಲ್ಲಿ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿರುವವರೆ ಅಧಿಕ. ವೈದ್ಯವಿಜ್ಞಾನ ಸಾಕಷ್ಟು ಮುಂದುವರೆದಿದ್ದರೂ ಕೂಡ ಗುಣಮುಖವಾಗಲು ಕೆಲಸಮಯ ಬೇಕು. ಆದರೆ ಅವಸರದ ಕಾಲಘಟ್ಟದಲ್ಲಿರುವ ರೋಗಿಗಳಿಗೆ ದಿನ ಬೆಳಗಾಗುವುದರೊಳಗೆ ಗುಣವಾಗಬೇಕು.
ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವಾಸ, ನಂಬಿಕೆ, ಭರವಸೆಯ ಆಧಾರದ ಮೇಲೆ ರೋಗಿ- ವೈದ್ಯನ ಸಂಬಂಧ ನಿರ್ಧಾರವಾಗುತ್ತದೆ. ಆದರೆ ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಬರುವ ಸಂಬಂಧಿಕರು ವೈದ್ಯರ ನಿರ್ಲಕ್ಷವೇ ಕಾರಣವೆಂದು ದೂರುತ್ತಾರೆ. ಆದರಲ್ಲಿಯೂ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯವಾಗಿದೆ. ಇದರಿಂದ ವೈದ್ಯರ ಮೇಲಿನ ಅಪನಂಬಿಕೆಯು ಹೆಚ್ಚಾಗಿದೆ. ವೈದ್ಯಕೀಯ ತಂತ್ರಜ್ಞಾನ ಹಾಗೂ ತಂತ್ರಜ್ಞಾನ ಮುಂದುವರೆದಂತೆ ಅಂಗೈ ತೆರದರೆ ಸಾಕು ರೋಗಗಳ ಕುರಿತು ಹಲವಾರು ರೀತಿಯ ಪುಕ್ಸಟ್ಟೆ ಸಲಹೆಗಳು ಸಿಗುತ್ತವೆ. ಈ ಗೂಗಲ್ ಎನ್ನುವ ಮಾಯಾಜಾಲವು ವೈದ್ಯರು ಮತ್ತು ರೋಗಿಯ ನಡುವೆ ಕಂದಕ ಏರ್ಪಡುವಂತೆ ವಾತಾವರಣ ಸೃಷ್ಠಿಸಿದೆ.
ಏನಾದರೂ ಆರೋಗ್ಯ ಸಮಸ್ಯೆಯಾದರೆ ಮೊದಲು ಜಾಲಾಡುವದೇ ಗೂಗಲ್ ಎನ್ನುವ ಮಾಯಾಜಾಲವನ್ನು. ಇದು ನೀಡುವ ಸಲಹೆಯನ್ನೇ ನಂಬುವ ರೋಗಿ ಮತ್ತು ಸಂಬಂಧಿಕರು ಶಸ್ತ್ರಚಿಕಿತ್ಸೆ ಮಾಡಲೇಬೇಕಾ ? ಮಾತ್ರೆಗಳಿಂದ ಕಡಿಮೆಯಾಗುತ್ತೆ ಎನ್ನುತ್ತಾರಲ್ಲ. ನೀವೇಕೆ ಇವುಗಳನ್ನೆಲ್ಲ ತಪಾಸಣೆಗೋಳ್ಪಡಿಸುತ್ತಿದ್ದೀರಿ ? ಇವು ತಪಾಸಣೆಗಳೆಲ್ಲ ಅವಶ್ಯವೇ ಎನ್ನುವ ಅನಾವಶ್ಯಕ ಪ್ರಶ್ನೆಗಳು ತೂರಿಬರುತ್ತವೆ. ಇದರಿಂದ ಕೆಲವು ಬಾರಿ ವೈದ್ಯರು ಗಲಿಬಿಲಿಗೊಂಡು ಶಸ್ತ್ರಚಿಕಿತ್ಸೆಯನ್ನೇ ರದ್ದು ಮಾಡಿರುವ ಘಟನೆಗಳು ನಮ್ಮ ಕಣ್ಣಮುಂದೆ ಇದೆ.
ಎಂದೋ 6 ತಿಂಗಳ ಹಿಂದೆ ಮಾಡಿಸಿದ್ದ ವೈದ್ಯಕೀಯ ಪರೀಕ್ಷೆಯನ್ನೇ ಹಿಡಿದು, ಮೊನ್ನೆ ಮಾಡಿಸಿದ್ದು, ಎನ್ನುತ್ತಾರೆ, ಆದರೆ ಆರು ತಿಂಗಳಲ್ಲಿ ದೇಹದ ಮೇಲೆ ಅನೇಕ ಪರಿಣಾಮವುಂಟಾಗಿರುತ್ತದೆ. ಆಗ ಮತ್ತೆ ಅವಶ್ಯವಿರುವ ತಪಾಸಣೆಗಳನ್ನು ಮಾಡಿಸಲೇಬೇಕು. ಆಗ ರೋಗಿಗಳನ್ನು ಒಪ್ಪಿಸಲು ವೈದ್ಯರು ಹೆಣಗಾಡಬೇಕಾಗುತ್ತದೆ. ಆದರೆ ರೋಗಿಗಳು ಕೇವಲ ಹಣ ಖರ್ಚು ಮಾಡಿಸುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ. ಆಧುನಿಕ ಕಾಲಘಟ್ಟದಲ್ಲಿ ಸಮಾಜದಲ್ಲಿ ಇಂತಹ ಭಾವನೆಗಳು ವೈದ್ಯಕೀಯ ಕ್ಷೇತ್ರದ ಮನಸ್ಥಿತಿಯನ್ನೇ ಬದಲಿಸಿದೆ. ರೋಗಿಗೆ ‘ವೈದ್ಯನೂ ಮನುಷ್ಯ, ವಿಶ್ವಾಸಕ್ಕೆ ಅರ್ಹ’ ಎಂಬ ಭಾವ, ವೈದ್ಯನಿಗೆ ತನ್ನ ಅತ್ಮಸಾಕ್ಷಿಯಿಂದ ಸರಿಯಾದ ಕ್ರಮ ತೆಗೆದುಕೊಳ್ಳುವ, ಅದನ್ನು ರೋಗಿಗೆ ಸ್ಪಷ್ಟವಾಗಿ ವಿವರಿಸುವಂತ ಕೌಶಲ್ಯವಿದ್ದರೆ ಅಪನಂಬಿಕೆಎಯನ್ನು ನಿವಾರಿಸಬಹುದು.
ತಾಳ್ಮೆ ಸಹನೆ ಎಂಬುದಂತೂ ಇಲ್ಲವೇ ಇಲ್ಲ. ಎಲ್ಲರೂ ಅಂತರ್ಜಾಲದ ಮೂಲಕ ಜಾಲಾಡಿ ರೋಗಗಳ ಬಗ್ಗೆ ಅರ್ಧಂಬರ್ಧ ತಿಳಿದುಕೊಂಡು ವೈದ್ಯರ ಮುಂದೆ ಜಾಣತನ ಪ್ರದರ್ಶಿಸಿ ವೈದ್ಯರ ಹಾದಿ ತಪ್ಪಿಸುವಲ್ಲಿ ಮಹತ್ತರ ಪಾತ್ರ ವಹಿಸುವುದೂ ಉಂಟು. ರೋಗಿಗಳಿಗಂತೂ ಈಗಿನ ಧಾವಂತ, ವೇಗದ ಜಗತ್ತಿನಲ್ಲಿ ದಿನಬೆಳಗಾಗುವುದರೊಳಗೆ ರೋಗ ವಾಸಿಯಗಬೇಕೆನ್ನುವ ಆಸೆ. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದಲ್ಲಿ ವೈದ್ಯ ಮತ್ತು ರೋಗಿಗಳ ನಡುವೆ ಸುಮಧುರ ಬಾಂದವ್ಯ ಮೂಡಲೇ ಬೇಕು. ರೋಗಿಗಳು ಕೂಡ ತಾಳ್ಮೆ ಸಂಯಮ ಕಾಯ್ದುಕೊಳ್ಳಬೇಕು. ವೈದ್ಯರ ಮೇಲೆ ಸಂಪೂರ್ಣ ಭರವಸೆ ಇಡಬೇಕು. ಎಲ್ಲ ಸಮಸ್ಯೆಗಳನ್ನೂ ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ದಿನ ಬೆಳಗಾಗುವುದರೊಳಗೆ ಯಾವ ವೈದ್ಯರಿಗೂ ಯಾವ ರೋಗವನ್ನು ಗುಣಪಡಿಸಲು ಅಸಾಧ್ಯ ಎಂಬ ಸತ್ಯವನ್ನು ರೋಗಿಗಳು ಅರಿತು ಸಂಯಮದಿಂದ ವರ್ತಿಸಿದಲ್ಲಿ ವೈದ್ಯರ ಕೆಲಸ ಸುಲಭವಾಗುವುದರಲ್ಲಿ ಎರಡು ಮಾತಿಲ್ಲ.
ವೈದ್ಯಕೀಯ ವೃತ್ತಿ ಎನ್ನುವುದು ರೋಗಿಗಳ ಸೇವೆ ಮಾಡುವ ಪವಿತ್ರವಾದ ವೃತ್ತಿ. ವೈದ್ಯರು ನೀಡುವ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ರಕ್ತನಾಳಗಳು ತುಂಡಾಗಿ ತೀವ್ರ ರಕ್ತಸ್ರಾವವಾದಾಗ, ಹೃದಯ ಸ್ತಂಬನವಾಗಿ ಎದೆ ಬಡಿತ ನಿಂತುಹೋದಾಗ, ವೈದ್ಯರು ಸಾಕ್ಷಾತ್ ದೇವರಾಗಿ ಕಾಣುತ್ತಾರೆ. ಆದರೆ ಕೆಲವೊಮ್ಮೆ ವೈದ್ಯರ ತೀವ್ರ ಪ್ರಯತ್ನದ ಬಳಿಕವೂ ಸಾವು ಸಂಭವಿಸಿದಲ್ಲಿ, ವೈದ್ಯರನ್ನೇ ಸಾವಿಗೆ ಹೊಣೆಮಾಡಿ, ಹಲ್ಲೆ, ಹಿಂಸಾಚಾರ ಆಸ್ಪತ್ರೆ ಮೇಲೆ ದಾಳಿ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಮಾನವೀಯತೆಯ ಲಕ್ಷಣವಲ್ಲ. ಅನೇಕ ಸಂದರ್ಭಗಳಲ್ಲಿ ರೋಗಿಯ ಆರೋಗ್ಯ ತೀವ್ರವಾಗಿ ಹದಗೆಟ್ಟು ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಆಗ ರೋಗಿಯನ್ನು ಬದುಕಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಅದನ್ನು ಜನರು ಹಾಗೂ ರೋಗಿಯ ಸಂಬAಧಿಕರು ಅರ್ಥ ಮಾಡಿಕೊಂಡು ಶಾಂತ ರೀತಿಯಿಂದ ವರ್ತಿಸಬೇಕು.
ಯಾವ ವೈದ್ಯರೂ ಕೂಡ ತನ್ನ ರೋಗಿ ಸಾಯಬೇಕೆಂದು ಬಯಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲಾ ವೈದ್ಯರು ಪ್ರಾಮಾಣಿಕವೆಂದು ತಿಳಿಯಬೇಕಿಲ್ಲ. ನೂರರಲ್ಲಿ ಒಬ್ಬರು ಅಪ್ರಾಮಾಣಿಕರು ಇರಲೂಬಹುದು. ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯ-ರೋಗಿಯ ಸಂಬAಧವೂ ಹಳಸಿದ ಲಕ್ಷಣಗಳು ಕಂಡುಬರುತ್ತಿವೆ. ರೋಗಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ವೈದ್ಯರು ನಿಡುವ ಔಷಧಿಗಳು ಎಷ್ಟು ಮುಖ್ಯವೋ ಅದೇ ರೀತಿ ವೈದ್ಯರ ಮೇಲಿನ ವಿಶ್ವಾಸ, ನಂಬಿಕೆಗಳು ಅತೀ ಅವಶ್ಯಕ. ವೈದ್ಯರು ಕೂಡಾ ನಿಮ್ಮಂತೆಯೇ ಮನುಷ್ಯರು ಅವರಿಗೂ ತಮ್ಮದೇ ಆದ ಇತಿ ಮಿತಿಗಳಿವೆ, ಅವರಿಗೂ ವೈಯಕ್ತಿಕ ಬದುಕು ಇದೆ ಎಂಬುದನ್ನು ರೋಗಿಗಳು ಅರ್ಥಮಾಡಿಕೊಳ್ಳಬೇಕು. ವೈದ್ಯರು ಮತ್ತು ರೋಗಿಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ಸರಿಯಾದ ದಾರಿಯಲ್ಲಿ ಸಾಗಿದರೆ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬಹುದು.
ಬಸವರಾಜ ಸೊಂಟನವರ