ಬೆಳಗಾವಿ: ಅಹಮದಾಬಾದನಲ್ಲಿ ಸಂಭವಿಸಿದ ವಿಮಾನ ಅಪಘಾತದ ದುರಂತದಲ್ಲಿ ಮೃತಪಟ್ಟ ಡಾ. ಪ್ರತೀಕ್ ಜೋಶಿ ಅವರು ಪರಿಸರ ಪ್ರೇಮಿ, ವೈದ್ಯಕೀಯ ತಂತ್ರಜ್ಞಾನದ ಕುರಿತು ಬಹಳಷ್ಟು ಉತ್ಸುಕತೆ ಹೊಂದಿರುವದರೊಂದಿಗೆ ಪರಿಶ್ರಮದಿಂದ ಅಭ್ಯಸಿಸುತ್ತಿದ್ದ ಅಲ್ಲದೇ ಎಲ್ಲರೊಂದಿಗೆ ಬೆರೆತು ಸ್ನೇಹದಿಂದ ಇರುತ್ತಿದ್ದ ಎಂದು ಕೆಎಲ್‌ಇ ಅಕಾಡೆಮಿ ಆಪ್ ಹೈಯರ ಎಜ್ಯಕೇಶನ್ ಆ್ಯಂಡ ರಿಸರ್ಚ (ಕಾಹೇರ್)ನ ( ವಿಶ್ವವಿದ್ಯಾಲಯ) ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ ಸ್ಮರಿಸಿದ್ದಾರೆ.
ರಾಜಸ್ಥಾನದ ಉದಯಪುರ ನಿವಾಸಿಯಾಗಿದ್ದ ಡಾ.ಪ್ರತೀಕ ಅವರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಗುರುವಾರ (ಜೂನ್ 12ರಂದು) ಮಧ್ಯಾಹ್ನ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪತನಗೊಂಡ ವಿಮಾನದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸಾವಿಗೀಡಾದರು.
2000-2005ರ ಬ್ಯಾಚ್‌ನ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದ ಜೋಶಿ, ನಂತರ ಕೋಲಾರದ ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ರೇಡಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದು, 2021ರಲ್ಲಿ ಲಂಡನ್‌ಗೆ ತೆರಳಿದ್ದರು. ತಮ್ಮ ಕುಟುಂಬವನ್ನೂ ಅಲ್ಲಿಗೇ ಕರೆದೊಯ್ಯಲು ಬಯಸಿದ್ದರು. ಅದರಂತೆ ಅವರ ಪತ್ನಿ
ಡಾ. ಕಾಮಿನಿ ಅವರು ತಮ್ಮ ವೃತ್ತಿಗೆ ರಾಜೀನಾಮೆ ನೀಡಿ,
ಜೋಶಿ ಅವರೊಂದಿಗೆ ಪ್ರಯಾಣ ಬೆಳೆಸಿದ್ದರು. ಮಗಳು ಮಿರಾಯ (8) ಹಾಗೂ 5 ವರ್ಷದ ಅವಳಿ ಮಕ್ಕಳಾದ ನಕುಲ್, ಪ್ರದ್ಯುತ್ ಕೂಡ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಬಳಿಕ ಅವರೆಲ್ಲರೂ ಕ್ಲಿಕ್ಕಿಸಿಕೊಂಡಿದ್ದ ಸೆಲ್ಪಿಯನ್ನು ಸಂಬಂಧಿಕರಿಗೆ ಕಳುಹಿಸಿ ಸಂಭ್ರಮಿಸಿದ್ದರು.
ಲಂಡನ್‌ಗೆ ತೆರಳುವ ಸಂಭ್ರಮದಲ್ಲಿದ್ದ ಜೋಶಿ ಹಾಗೂ ಅವರ ಕುಟುಂಬದವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದು ದುರದೃಷ್ಟಕರ ಎಂದು ಜೆಎನ್‌ಎಂಸಿ ಪ್ರಾಚಾರ್ಯ ಡಾ. ಎನ್.ಎಸ್. ಮಹಾಂತಶೆಟ್ಟಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.