ಬೆಳಗಾವಿ: ಆ ವಿದ್ಯಾರ್ಥಿ ಆಶಾ ಕಾರ್ಯಕರ್ತೆ ಮಗ. ಈ ವಿದ್ಯಾರ್ಥಿನಿ ರೈತನ ಮಗಳು. ಮತ್ತೋರ್ವ ವಿದ್ಯಾರ್ಥಿನಿ ತಂದೆ ಇಲ್ಲದ ಮಗಳು. ಇನ್ನೊರ್ವ ವಿದ್ಯಾರ್ಥಿನಿ ಸೈನಿಕ ಪುತ್ರಿ. ಇವರೆಲ್ಲಾ ಬಡತನವನ್ನೆ ಮೆಟ್ಟಿ ನಿಂತು ಚಿನ್ನದ ಪದಕಕ್ಕೆ ಮುತ್ತಿಟ್ಟವರು. ಸಾಧನೆಗೆ ಬಡತನ ಅಡ್ಡಿ ಆಗುವುದಿಲ್ಲ ಎಂದು ನಿರೂಪಿಸಿ, ಪೋಷಕರಿಗೆ ಈ ಮಕ್ಕಳು ಕೀರ್ತಿ ತಂದಿದ್ದಾರೆ.
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಇಂದು 13ನೇ ಘಟಿಕೋತ್ಸವ ನಡೆಯಿತು. ಈ ವೇಳೆ ಚಿನ್ನದ ಪದಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳದ್ದು ಒಂದೊಂದು ಕಥೆ. ಬಹುತೇಕರು ಬಡತನದಲ್ಲೆ ಅರಳಿದ ಪ್ರತಿಭೆಗಳು. ಅತ್ತ ಮಕ್ಕಳು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಕೈಯಿಂದ ಚಿನ್ನದ ಪದಕಕ್ಕೆ ಕೊರಳೊಡ್ಡುತ್ತಿದ್ದಂತೆ ಇತ್ತ ಅವರ ಪೋಷಕರ ಮೊಗದಲ್ಲಿ ಮಂದಹಾಸ ಮೂಡಿ, ಕಣ್ಣಲ್ಲಿ ಆನಂದಭಾಷ್ಪ ಸುರಿಸಿದರು.
ಎಂಎ ಕನ್ನಡ ವಿಭಾಗದಲ್ಲಿ ಎರಡು ಚಿನ್ನದ ಪದಕ ಸ್ವೀಕರಿಸಿದ ಅಥಣಿ ತಾಲ್ಲೂಕಿನ ಅರಟಾಳ ಗ್ರಾಮದ ಶಿವಶಂಕರ ಕಾಂಬಳೆ ಮಾತನಾಡಿ, ಹಿಂದೆ ಪಿಯುಸಿ, ಪದವಿ ಸೇರಿ ಯಾವುದೇ ತರಗತಿಯಲ್ಲಿ ಪ್ರಥಮ ಸ್ಥಾನ ಬಂದಿರಲಿಲ್ಲ. ಇದೇ ಮೊದಲ ಬಾರಿ ಎಂ.ಎ. ದಲ್ಲಿ ಮೊದಲ ಸ್ಥಾನ ಪಡೆದಿದ್ದೇನೆ. ನನಗೆ ತುಂಬಾ ಸಂತೋಷ ಆಗುತ್ತಿದೆ. ನಿರಂತರ ಓದು, ಅಧ್ಯಾಪಕರ ಒಳ್ಳೆಯ ಮಾರ್ಗದರ್ಶನ, ತಂದೆ-ತಾಯಿ ಪರಿಶ್ರಮದಿಂದ ಎರಡು ಚಿನ್ನದ ಬಂದಿವೆ. ಕೂಲಿ ಕೆಲಸ ಮಾಡುವ ತಂದೆ, ಆಶಾಕಾರ್ಯಕರ್ತೆ ಆಗಿರುವ ನನ್ನ ತಾಯಿಗೆ ಈ ಚಿನ್ನದ ಪದಕಗಳನ್ನು ಅರ್ಪಣೆ ಮಾಡುತ್ತೇನೆ. ಪ್ರತಿನಿತ್ಯ ಆರು ಗಂಟೆ ಓದುತ್ತಿದ್ದೆ. ಪರೀಕ್ಷೆ ಸಮೀಪ ಹೆಚ್ಚು ಸಮಯ ಅಭ್ಯಾಸ ಮಾಡುತ್ತಿದ್ದೆ. ಮುಂದೆ ಪ್ರಾಧ್ಯಾಪಕನಾಗುವ ಗುರಿ ಇಟ್ಟುಕೊಂಡಿದ್ದೇನೆ. ಪಿಎಚ್ಡಿ ಮಾಡುವ ಆಶಯವೂ ಇದೆ. ವಿದ್ಯಾರ್ಥಿಗಳಿಗೆ ಸರ್ಕಾರ ಹಾಸ್ಟೇಲ್ ಸೇರಿ ಎಲ್ಲ ರೀತಿ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಹಾಗಾಗಿ, ಎಲ್ಲರೂ ಚನ್ನಾಗಿ ಓದಿ ತಮ್ಮ ತಂದೆ-ತಾಯಿ ಚನ್ನಾಗಿ ನೋಡಿಕೊಳ್ಳಿರಿ ಎಂದು ಕಿವಿಮಾತು ಹೇಳಿದರು.
ನಾನು ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಚಿನ್ನದ ಪದಕ ಪಡೆದ ಮೊದಲ ವಿದ್ಯಾರ್ಥಿನಿ. ಮೊದಲು ನನ್ನದು ಉರ್ದು ಮಾಧ್ಯಮ. ಎಂಬಿಎದಲ್ಲಿ ಚಿನ್ನದ ಪದಕ ಸಿಕ್ಕಿದೆ. ಮುಂದೆ ಎಂಎನ್ಸಿ ಕಂಪನಿ ಇಲ್ಲವೇ ಪ್ರಾಧ್ಯಾಪಕಿಯಾಗುವ ಆಶಯವಿದೆ. ನನ್ನ ತಂದೆ-ತಾಯಿ ಓದಿಲ್ಲ. ಆದರೆ, ನನಗೆ ಕಷ್ಟ ಪಟ್ಟು ಓದಿಸಿದ್ದಾರೆ. ಅವರಿಗೆ ಅದೇಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಇನ್ನು ನನ್ನ ಅಣ್ಣಾ ನನಗೆ ತುಂಬಾ ಸಹಾಯ ಮಾಡಿದ್ದಾನೆ. ತಂದೆ-ತಾಯಿ ಬಿಟ್ಟರೆ ನನಗೆ ಎಲ್ಲವೂ ಅಣ್ಣನೇ ಎಂದು ಭಾವುಕರಾದರು ಚಿನ್ನದ ಹುಡುಗಿ ಹೀನಾ ಕೌಸರ್ ಮೌಲಾಬಿನ್ ತುಬಾಕಿ.
ಗೋಕಾಕ್ ಕೆಎಲ್ಇ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಬಸೀರಾ ಮೊಹಮ್ಮದ್ ಯುಸೂಫ್ ಮೇಲಾದಿ ಮಾತನಾಡಿ, ನನ್ನ ತಂದೆ ತೀರಿಕೊಂಡು ನಾಲ್ಕು ವರ್ಷ ಆಯಿತು. ಆದರೆ, ಅವರು ನನಗೆ ಸಾಕಷ್ಟು ಸಲಹೆ, ಮಾರ್ಗದರ್ಶನ ಮಾಡಿದ್ದರು. ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಸಾಧನೆ ಮಾಡುವಂತೆ ಪ್ರೇರೇಪಿಸಿದ್ದರು. ಇನ್ನು ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹಿಸುವುದಿಲ್ಲ. ಆದರೆ, ನನ್ನ ತಾಯಿ ಕಿರಾಣಿ ಅಂಗಡಿ ನಡೆಸಿ ಸಾಕಷ್ಟು ಹೋರಾಟ ಮಾಡಿ ನನಗೆ ಓದಿಸುತ್ತಿದ್ದಾರೆ. ನನ್ನ ನಾಲ್ವರು ಸಹೋದರಿಯರ ವಿವಾಹ ಆಗಿದೆ. ನಾನೇ ಕೊನೆಯವಳು. ಗಂಡು ಮಗನಂತೆ ತಾಯಿ ಬೆಳೆಸಿದ್ದಾರೆ. ಅವರಿಗೆ ಕೀರ್ತಿ ತರಬೇಕು ಅಂತಾ ಚಿನ್ನದ ಪದಕ ಗೆದ್ದಿದ್ದೇನೆ. ಸಹೋದರಿ ಸಾಜಿಯಾ ಮತ್ತು ಅವರ ಪತಿ ಕೂಡ ನೆರವು ಬಹಳಷ್ಟಿದೆ. ಮುಂದೆ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ತಾಯಿಯನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ ಎಂದರು.
ಮಾಜಿ ಸೈನಿಕನ ಪುತ್ರಿಗೆ ಚಿನ್ನದ ಪದಕ:
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಕಾತರಕಿ ಗ್ರಾಮದ ಶ್ರೀದೇವಿ ಅರಕೇರಿ ಗಣಿತ ವಿಷಯದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಬಹು ದಿನದ ಪರಿಶ್ರಮಕ್ಕೆ ಇಂದು ಯಶಸ್ಸು ಸಿಕ್ಕಿದೆ. ಇದು ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲು ಮೆಟ್ಟಿಲು. ಮುಂದೆ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿ ಆಗಬೇಕು ಎಂದುಕೊಂಡಿದ್ದೇನೆ. ತಂದೆ ಮಾಜಿ ಸೈನಿಕರು, ತಾಯಿ ಗೃಹಿಣಿ ಆಗಿದ್ದಾರೆ. ತರಗತಿಯಲ್ಲಿ ಶಿಕ್ಷಕರು ಹೇಳಿದ್ದು ಗಮನವಿಟ್ಟು ಕೇಳುತ್ತಿದ್ದೆ. ಹಾಸ್ಟೇಲ್ ರೂಮಿಗೆ ಬಂದು ಪುನಃ ಓದಿಕೊಳ್ಳುತ್ತಿದ್ದೆ. ಏನಾದರೂ ಗೊಂದಲ ಇದ್ದರೆ ಉಪನ್ಯಾಸಕರಿಂದ ಪರಿಹರಿಸಿಕೊಳ್ಳುತ್ತಿದ್ದೆ ಎಂದು ಹೇಳಿದರು.
ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಸಾಮರಸ್ಯದಡಿ ನಿಡಸೋಸಿ ಮಠದ ಜಗದ್ಗುರು ಶಿವಲಿಂಗೇಶ್ವರ ಸ್ವಾಮೀಜಿ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್, ಕಾನೂನು, ನ್ಯಾಯ ಮತ್ತು ಸಾಂವಿಧಾನಿಕ ಅರಿವು ಸೇವೆಯಡಿ ಮುಖ್ಯ ನಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರಿಗೆ ಡಾಕ್ಟರ್ ಆಫ್ ಲಾ, ಶಿಕ್ಷಣ, ಸಹಕಾರ ಮತ್ತು ಸಾಮಾಜಿಕ ಸೇವೆಯಡಿ ವಿಜಯಪುರದ ವಿಜಯಪುರದ ಸೀಕ್ಯಾಬ್ ಅಧ್ಯಕ್ಷ ಶಮಸುದ್ದೀನ್ ಅಬ್ದುಲ್ಲಾ ಪುಣೇಕರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪ್ರದಾನ ಮಾಡಲಾಯಿತು. ಬಳಿಕ 46,013 ಸ್ನಾತಕ ಪದವಿ, 2866 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಲಾಯಿತು.11 ಜನ ವಿದ್ಯಾರ್ಥಿಗಳಿಗೆ ಸುವರ್ಣ ಪದಕಗಳು, ಒಂದು ನಗದು ಬಹುಮಾನ, 20 ಪಿಎಚ್ ಡಿ ಪ್ರದಾನ ಮಾಡಲಾಯಿತು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿದ್ದರು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಪದ್ಮಶ್ರೀ ಪುರಸ್ಕೃತ ಪ್ರೊ.ಗಣೇಶ ನಾರಾಯಣದಾಸ್ ದೇವಿ ಅವರು ವೀಡಿಯೋ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್, ಕುಲಸಚಿವರಾದ ಸಂತೋಷ ಕಾಮಗೌಡ, ಪ್ರೊ.ರವೀಂದ್ರನಾಥ ಕದಂ, ಹಣಕಾಸು ಅಧಿಕಾರಿ ಎಂ.ಎ.ಸಪ್ನಾ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಬಡತನವನ್ನೆ ಮೆಟ್ಟಿ ನಿಂತು ಚಿನ್ನದ ಪದಕಕ್ಕೆ ಮುತ್ತಿಟ್ಟವರು
