ಬೆಳಗಾವಿ: ಪ್ರಯಾಗ್ ರಾಜ್ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ದುರ್ಮರಣ ಹೊಂದಿದ ಬೆಳಗಾವಿ ನಾಲ್ವರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಪರಿಹಾರವನ್ನು ಉತ್ತರಪ್ರದೇಶ ಸರ್ಕಾರ ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಯಾಗ್ ರಾಜ್ ಜಿಲ್ಲಾಧಿಕಾರಿ ರವಿ ಮಂದರ್ ಅವರ ಜೊತೆಗೆ ಮಾತುಕತೆ ನಡೆಸಿ ಮೃತರಾದ ಜ್ಯೋತಿ ಹತ್ತರವಾಟ, ಮೇಘಾ ಹತ್ತರವಾಟ, ಮಹಾದೇವಿ ಬಾವನೂರ, ಅರುಣ ಕೋಪರ್ಡೆ‌ ಅವರ ಕುಟುಂಬಸ್ಥರ ಖಾತೆಗಳಿಗೆ ನೇರವಾಗಿ ಪರಿಹಾರ ಧನ ಜಮೆ ಆಗಿದೆ. ನಾವು ಗ್ರಾಮಲೆಕ್ಕಾಧಿಕಾರಿ ಮೂಲಕ ಪರಿಶೀಲಿಸಿದ್ದೇವೆ ಎಂದರು.
ಮೃತದೇಹಗಳ ವರದಿಯಲ್ಲಿ ಒಂದಿಬ್ಬರ ಹೆಸರಿನಲ್ಲಿ ಅಕ್ಷರದೋಷ ಕಂಡು ಬಂದಿರುವ ಕುರಿತು ಮೃತರ ಕುಟುಂಬಸ್ಥರು ತಿಳಿಸಿದ್ದರು. ಹಾಗಾಗಿ, ಅದನ್ನು ಅನುಮೋದಿಸಿ, ಸರಿಪಡಿಸಿ ಹೆಸರುಗಳನ್ನು ಪ್ರಯಾಗ್ ರಾಜ್ ಜಿಲ್ಲಾಧಿಕಾರಿಗಳಿಗೆ ವಾಟ್ಸಪ್ ಮತ್ತು ಮೇಲ್ ಕಳಿಸಿದ್ದೇನೆ. ಹಾಗಾಗಿ, ಇನ್ನೆರಡು ದಿನಗಳಲ್ಲಿ ಮರಣೋತ್ತರ ವರದಿ ಮತ್ತು ಮರಣ ಪ್ರಮಾಣಪತ್ರವನ್ನು ಕಳಿಸಿಕೊಡುವ ಬಗ್ಗೆ ಪ್ರಯಾಗ್ ರಾಜ್ ಜಿಲ್ಲಾಡಳಿತ ನಮಗೆ ಭರವಸೆ ನೀಡಿದೆ ಎಂದು ಮೊಹಮ್ಮದ್ ರೋಷನ್ ತಿಳಿಸಿದರು.