ಬೆಳಗಾವಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಅಂಕಿತಾಧಿಕಾರಿ ಹಾಗೂ ಆಹಾರ ಸುರಕ್ಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ೩೬ ಜನ ವೈದ್ಯರು ವಿವಿಧ ಭತ್ಯೆಗಳ ರೂಪದಲ್ಲಿ ನಿಯಮಬಾಹಿರವಾಗಿ 3.50 ಕೋಟಿಗೂ ಅಧಿಕ ರೂ. ಹಣ ಲಪಟಾಯಿಸಿದ್ದಾರೆ ಎಂದು
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದರು.
ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಧಿಕರಿಗಳಿಗೆ ಭತ್ತೆ ಹಾಗೂ ವಿಶೇಷ ಭತ್ಯೆ ಪಡೆಯಲು ನಿಯಮಾವಳಿ ಗಳಲ್ಲಿ ಅವಕಾಶವಿಲ್ಲದಿದ್ದರೂ ಕೂಡ ಕರ್ನಾಟಕ ನಾಗರಿಕ ಸೇವಾ ನಿಯಮ ಉಲ್ಲಂಘಿಸಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರಕಾರಕ್ಕೆ ಕೋಟಿ ಕೋಟಿ ನಷ್ಟ ಉಂಟು ಮಾಡಿರುವ ಬಗ್ಗೆ ಮಾಹಿತಿ ಹಕ್ಕಿನಿಂದ ತಿಳಿದು ಬಂದಿದೆ. ಆದರೆ, ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೇ ಇರುವ ಹಿರಿಯ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಸರಕಾರಕ್ಕೆ ಹಾಗೂ ಆಹಾರ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಆಹಾರ ಸುರಕ್ಷ ಮತ್ತು ಗುಣಮಟ್ಟ ಇಲಾಖೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸದೆ
ಕಾಟಾಚಾರಕ್ಕೆ ಎಂಬಂತೆ ಕೇವಲ ಹಣ ಮರುಪಾವತಿಗೆ ಆದೇಶಿಸಿದ್ದಾರೆ. ಇದು ತಪ್ಪಿತಸ್ಥರನ್ನು ರಕ್ಷಣೆ ಮಾಡಲು ಹೊರಡಿಸಿದ ಆದೇಶವಾಗಿದೆ. ಆದ್ದರಿಂದ ಸರಕಾರ ಹಣ ಮರುಪಾವತಿ ಜೊತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಭತ್ಯೆಗಳ ಹೆಸರಲ್ಲಿ ಸರಕಾರಕ್ಕೆ ಪಂಗನಾಮ ಹಾಕಿದ ಅಧಿಕಾರಿಗಳ ಕ್ರಿಮಿನಲ್ ಮೊಕದ್ದಮೆ ದಾಖಲಿಸದ ಅಧಿಕಾರಿಗಳ ವಿರುದ್ದ ಉಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಯೋಚಿಸುತ್ತಿದ್ದೇನೆ. ಸರಕಾರ ಏನಾದರೂ ಈ ಬಗ್ಗೆ ಕ್ರಮವಹಿಸದಿದ್ದಲ್ಲಿ. ನಾನೇ ಅವರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಾಳು ಮಗಳಕೊಡ, ಸಿದ್ದಪ್ಪ ಬಳೆಗಾರ
ಇದ್ದರು.