ಬೆಳಗಾವಿ, ಡಿ.19: ಮಹಿಳಾ ಸ್ವ-ಸಹಾಯ ಸಂಘಗಳಿಗೆ ಆದಾಯ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನಿರ್ದೇಶನದಂತೆ ರಾಷ್ಟೀಯ ಜೀವನೋಪಾಯ ಅಭಿಯಾನ ಅಡಿಯಲ್ಲಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ವ್ಯಾಪ್ತಿಯಲ್ಲಿ 50 “ಅಕ್ಕ ಕೆಫೆ”ಗಳನ್ನು ಪ್ರಾರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣ ಪ್ರಕಾಶ ಪಾಟೀಲ ಅವರು ತಿಳಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟೀಯ ಜೀವನೋಪಾಯ ಅಭಿಯಾನ ಅಡಿಯಲ್ಲಿ ಗುರುವಾರ (ಡಿ.19) ಜಿ.ಪಂ. ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ “ಅಕ್ಕ ಕೆಫೆ” ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ಹೊರತುಪಡಿಸಿ ಬೆಳಗಾವಿಯಲ್ಲಿ “ಅಕ್ಕ ಕೆಫೆ” ಕ್ಯಾಂಟೀನ್ ಪ್ರಾರಂಭಿಸಲಾಗಿದೆ. ಸ್ವ-ಸಹಾಯ ಸಂಘಗಳಿಗೆ ಆದಾಯ ಒದಗಿಸುವ ವಿನೂತನ ಯೋಜನೆ ಇದಾಗಿದೆ. ಇಡೀ ರಾಜ್ಯದಲ್ಲಿ ಮೂರು “ಅಕ್ಕ ಕೆಫೆ” ಪ್ರಾರಂಭದಲ್ಲಿವೆ. ಬರುವಂತಹ ದಿನಗಳಲ್ಲಿ ರಾಜ್ಯದ ವಿವಿಧೆಡೆ 50 ಅಕ್ಕ ಕೆಫೆ ಪ್ರಾರಂಭಿಸಲಾಗುವುದು. ಕೆಫೆ ನಿರ್ವಹಣೆಗಾಗಿ ಸುಮಾರು 15 ಲಕ್ಷ ರೂಪಾಯಿಗಳ ಸಹಾಯ ಧನ ನೀಡಲಾಗುತ್ತಿದೆ ಎಂದು ಹೇಳಿದರು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಖ್ಯ ವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಸರ್ಕಾರ ಸ್ವಾವಲಂಬಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇಂತಹ ವಿನೂತನ ಯೋಜನೆಗಳನ್ನು ಬಳಕೆ ಮಾಡಿಕೊಂಡು ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಎಂದು ಸಚಿವ ಶರಣ ಪ್ರಕಾಶ ಪಾಟೀಲ ಅವರು ತಿಳಿಸಿದರು.
ಸಾಂಬ್ರಾ ವಿಮಾನ ನಿಲ್ದಾಣದ ಆವರಣದಲ್ಲಿ ಸಂಜೀವಿನಿ ಸ್ವ-ಸಹಾಯ ಸಂಘಗಳ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಹಾಗೂ ಪ್ರದರ್ಶನಕ್ಕಾಗಿ “ಅವಸರ” ಮಳಿಗೆ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು.
“ಅಕ್ಕ ಕೆಫೆ” ಆಹಾರ ಗುಣಮಟ್ಟ-ಶುಚಿ-ರುಚಿಗೆ ಮೆಚ್ಚುಗೆ:ಇದಕ್ಕೂ ಮುಂಚೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣ ಪ್ರಕಾಶ ಪಾಟೀಲ, ಶಾಸಕ ಆಸೀಫ್ (ರಾಜು) ಸೇಠ ಅವರು “ಅಕ್ಕ ಕೆಫೆ”ಯಲ್ಲಿ ತಯಾರಿಸಲಾದ ಅಲ್ಫೋಪಹಾರ ಸೇವಿಸಿ, ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು.
“ಅಕ್ಕ ಕೆಫೆ” ಮಹಿಳಾ ಸಿಬ್ಬಂದಿಗಳು ತಯಾರಿಸಿದ ಆಹಾರ ಗುಣಮಟ್ಟ ಹಾಗೂ ಶುಚಿ-ರುಚಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮೆಚ್ಚಿಗೆ ವ್ಯಕ್ತಪಡಿಸಿದರು.
ಜಿ.ಪಂ ಹೆಚ್ಚುವರಿ ಕೊಠಡಿ ಉದ್ಘಾಟನೆ:
ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸಚಿವ ಶರಣ ಪ್ರಕಾಶ್ ಪಾಟೀಲ ಅವರು ಜಿಲ್ಲಾ ಪಂಚಾಯತ್ ಕಟ್ಟಡ ನಿರ್ಮಾಣ ಮತ್ತು ಕಟ್ಟಡ ನಿರ್ವಹಣೆ ಯೋಜನೆಯಡಿ ದಾಖಲೆಗಳ ಕ್ರೊಡಿಕರಣಕ್ಕಾಗಿ ಹೆಚ್ಚುವರಿಯಾಗಿ ನಿರ್ಮಿಸಲಾದ ಜಿಲ್ಲಾ ಪಂಚಾಯತ್ 2ನೇ ಮಹಡಿಯಲ್ಲಿನ ನೂತನ ಕೊಠಡಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ, ಶಾಸಕ ಶರತ್ ಕುಮಾರ ಬಚ್ಚೆಗೌಡ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಐಎಎಸ್ ಪ್ರೊಬೇಷನರಿ ಅಧಿಕಾರಿ ದಿನೇಶ್ ಕುಮಾರ ಮೀನಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ರಾಜ್ಯದಲ್ಲಿ 50 “ಅಕ್ಕ ಕೆಫೆ” ಶೀಘ್ರವೇ ಪ್ರಾರಂಭ: ಸಚಿವ ಶರಣ ಪ್ರಕಾಶ್ ಪಾಟೀಲ
