ಬೆಳಗಾವಿ: ಬೆಳಗಾವಿಯಲ್ಲಿ ಗುರುವಾರ ಮಧ್ಯರಾತ್ರಿಯಿಂದಲೇ ರಾಜ್ಯೋತ್ಸವ ಆರಂಭವಾಗಿದ್ದು, ಶುಕ್ರವಾರ ರಾತ್ರಿ 11 ಗಂಟೆಯಾದರೂ ಮೆರವಣಿಗೆ ಸಾಗುತ್ತಲಿದೆ. ನಗರದಾದ್ಯಂತ ಕನ್ನಡಿಗರ ಸಂಭ್ರಮವೋ ಸಂಭ್ರಮ. ಎಲ್ಲಿ ನೋಡಿದರಲ್ಲಿ ಕನ್ನಡವೇ ಕಾಣುತ್ತಿತ್ತು. ಅಷ್ಟೊಂದು ಜನರು ಕನ್ನಡಿಗರ ಹಬ್ಬದಲ್ಲಿ ಪಾಲ್ಗೊಂಡಿದ್ದರು
ದೀಪಾವಳಿ ಹಬ್ಬ ಇರುವ ಕಾರಣ ಈ ಸಲದ ದೀಪ ರಾಜ್ಯೋತ್ಸವ ಆಚರಣೆ ಬಗ್ಗೆ ಹಲವು ಗೊಂದಲ ಮೂಡಿದ್ದವು. ಕೊನೆಗೂ ಕನ್ನಡ ಸಂಘಟನೆಗಳ ಕಾರ್ಯಕರ್ತರು ಯಾವುದೇ ಕಾರಣಕ್ಕೂ ರಾಜ್ಯೋತ್ಸವದ ದಿನ ಬದಲಾವಣೆ ಮಾಡಕೂಡದು ಎಂದು ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿದ್ದರು. ಕೊನೆಗೂ ಕನ್ನಡ ಸಂಘಟನೆಗಳು ಹಾಗೂ ಕನ್ನಡ ಅಭಿಮಾನಿಗಳು ಗುರುವಾರ ರಾತ್ರಿ 12 ಗಂಟೆ ಆಗುತ್ತಿದ್ದಂತೆ ನಗರದ ಚನ್ನಮ್ಮ ವೃತ್ತದಲ್ಲಿ ಕೇಕ್ ಕತ್ತರಿಸುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ಕನ್ನಡ ಬಾವುಟಗಳು, ಕನ್ನಡ ನಾಡು ನುಡಿಯನ್ನು ಬಿಂಬಿಸುವ ಕನ್ನಡ ಗೀತೆಗಳು ರಾರಾಜಿಸಿದವು. ರಾತ್ರಿ 11 ಗಂಟೆಯಾದರೂ ಕೂಡ ಭವ್ಯ ಮೆರವಣಿಗೆ ಅತ್ಯಂತ ವಿಜ್ರಂಭಣೆಯಿಂದ ಸಾಗುತ್ತಿದೆ. ಕನ್ನಡ ಅಭಿಮಾನಿಗಳು ದೀಪಾವಳಿ ಹಬ್ಬದ ನಡುವೆಯು ನಾಡ ಅಭಿಮಾನದಲ್ಲಿ ಮಿಂದೆದ್ದರು.
ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ ಕನ್ನಡ ಚಿತ್ರಗೀತೆಗಳಿಗೆ ಕುಣಿದು ಕುಪ್ಪಳಿಸಿದರು.ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿವಿಧ ರೂಪಕಗಳು ಗಮನಸೆಳೆದವು. ಡಿಜೆ, ಡಾಲ್ಬಿ ಹಾಡುಗಳಿಗೆ ಯುವಕ-ಯುವತಿಯರು ಹೆಜ್ಜೆ ಹಾಕಿದರು. ಎಲ್ಲೆಡೆ ಕಲರವ ರಾರಾಜಿಸುತ್ತಿದ್ದು, ಕನ್ನಡಿಗರು ಹುಚ್ಚೆದ್ದು ಕುಣಿದು ಕನ್ನಡ ಹಬ್ಬಕ್ಕೆ ಸಾಕ್ಷಿಯಾದರು.