ಬೆಳಗಾವಿ : ಮಹಾನಗರ ಪಾಲಿಕೆಯ ನೂತನ ಆಯುಕ್ತೆ ಶುಭ ಅವರು ಅಧಿಕಾರ ವಹಿಸಿಕೊಂಡ ನಂತರ ತೆರಿಗೆ ಸಂಗ್ರಹಕ್ಕೆ ಪ್ರಧಾನ ಆದ್ಯತೆ ನೀಡುವುದಾಗಿ ಹೇಳಿದ್ದರು. ಅದರಂತೆ ಇದೀಗ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ತೆರಿಗೆ ವಸೂಲಿ ಅಭಿಯಾನ ನಡೆಸುತ್ತಿದ್ದಾರೆ. ಗುರುವಾರ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.
ತೆರಿಗೆ ಬಾಕಿ ಉಳಿಸಿಕೊಂಡ ಅಂಗಡಿ-ಮುಂಗಟ್ಟು ಹಾಗೂ ವಾಣಿಜ್ಯೋದ್ಯಮ ಮಳಿಗೆಗಳನ್ನು ಸೀಜ್ ಮಾಡಲಾಗಿದೆ. ಶೇಕಡಾ 100 ರಲ್ಲಿ 62% ರಷ್ಟು ಗುರಿ ಮುಟ್ಟಲಾಗಿದೆ. ವಾರದೊಳಗೆ ತೆರಿಗೆ ಪಾವತಿ ಮಾಡದೆ ಇರುವವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಮಾರುತಿ ಗಲ್ಲಿಯ ಕಾಮತ್ ಹೋಟೆಲ್ ಸೀಜ್ ಮಾಡಿರುವ ಅಧಿಕಾರಿಗಳು, ತೆರಿಗೆ ಕಟ್ಟದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಅನುಸರಿಸುವ ಮೂಲಕ ಇತರರಿಗೆ ಎಚ್ಚರಿಕೆ ರವಾನಿಸಿದರು. ಸಾಕಷ್ಟು ಸಮಯದಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ತೆರಿಗೆದಾರರನ್ನು ಪಟ್ಟಿ ಮಾಡಿರುವ ಅಧಿಕಾರಿಗಳು ಅಂಥವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಮಹಾನಗರ ಪಾಲಿಕೆ ಕಂದಾಯ ವಿಭಾಗದ ರೇಷ್ಮಾ ತಾಳಿಕೋಟಿ, ಕಂದಾಯ ಅಧಿಕಾರಿ ಅಣ್ಣಿ ಶೆಟ್ಟರ್, ಸಹಾಯಕ ಕಂದಾಯ ಅಧಿಕಾರಿ ಅನುರಾಧ ಮುಂತಾದವರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.