ಬೆಳಗಾವಿ: ಶಹಾಪುರದಲ್ಲಿ ರಸ್ತೆ ನಿರ್ಮಾಣಕ್ಕೆ ಸ್ವಾಧೀನ ಪಡೆದ ಭೂಮಿಯನ್ನು ಗೌರವಯುತವಾಗಿ ಮೂಲ ಮಾಲೀಕರಿಗೆ ಮರಳಿ ನೀಡಬೇಕೆಂದು ಹೈಕೋರ್ಟನ ಧಾರವಾಡ ಪೀಠ ಆದೇಶಿಸಿದೆ. ಹಿಂತಿರುಗಿಸದಿದ್ದರೆ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳಿಗೆ ಐದು ಲಕ್ಷ ರೂ.ಗಳ ದಂಡವನ್ನು ವಿಧಿಸಿ, ತಮ್ಮ ಸೇವಾ ಪುಸ್ತಕದಲ್ಲಿ ನಮೂದಿಸಲಾಗುವುದು ಎಂದು ಎಚ್ಚರಿಸಿದೆ. ಜಾಗವನ್ನು ಮರಳಿ ಹಸ್ತಾಂತರಿಸುವಾಗ ಪೊಲೀಸ್ ಪಡೆಯನ್ನು ನಿಯೋಜಿಸಬೇಕು.
ಪ್ರತಿವಾದಿ ಅಥವಾ ಬೇರೆ ಯಾರಾದರೂ ವಿರೋಧಿಸಿದರೆ, ತಕ್ಷಣ ಅವರನ್ನು ಬಂಧಿಸಬೇಕು ಮತ್ತು ಭೂಮಿ ಹಿಂದಿರುಗಿಸುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಸ್ಟಡಿಯಲ್ಲಿ ಇಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ನಿಗದಿಪಡಿಸಲಾಗಿದೆ. ಹೀಗಾಗಿ ಪಾಲಿಕೆಯು ಸೆಪ್ಟೆಂಬರ್ 22ರೊಳಗೆ 23 ಗುಂಟೆ ಜಾಗವನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಬೇಕಾಗಿದೆ.
ಪಾಲಿಕೆಯ ವಕೀಲರು ಈ ರಸ್ತೆಯನ್ನು ಮಹಾನಗರಪಾಲಿಕೆಗೆ ಇನ್ನೂ ವರ್ಗಾಯಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ನ್ಯಾಯಾಲಯದ ಆದೇಶದಂತೆ ಮುನ್ಸಿಪಲ್ ಕಾರ್ಪೊರೇಷನ್ ಮೂಲಕ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ಪಾಲಿಕೆ ಆಯುಕ್ತರು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ, ಏನೇ ಆಗಲಿ ಭಾನುವಾರದೊಳಗೆ ಭೂಮಿ ಹಿಂದಿರುಗಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಮೂಲ ಮಾಲೀಕರಿಗೆ ಮೂರು ದಿನದೊಳಗೆ ನಿವೇಶನ ನೀಡುವ ಸಾಧ್ಯತೆ ಇದೆ.
ರಸ್ತೆಗಾಗಿ ವಶಪಡಿಸಿಕೊಂಡ ಭೂಮಿ ಮರಳಿಸಿ : ಹೈಕೋರ್ಟ್
