ಬೆಳಗಾವಿ : ದೇಶದ ಅತಿ ವೇಗದ ರೈಲುಗಳಲ್ಲಿ ಒಂದು ಎಂಬ ಕೀರ್ತಿಗೆ ಪಾತ್ರರಾಗಿರುವ ವಂದೇ ಭಾರತ್ ರೈಲು ಬೆಳಗಾವಿಗೆ ಆಗಮಿಸಿದೆ. ಪುಣೆಯಿಂದ ಬೆಳಗಾವಿಗೆ ಆಗಮಿಸಿರುವ ಅತ್ಯಂತ ಮಹತ್ವಾಕಾಂಕ್ಷೆಯ ವಂದೇ ಭಾರತ್ ರೈಲಿಗೆ ಬೆಳಗಾವಿ ಜನತೆ ಅಭೂತಪೂರ್ವ ಸ್ವಾಗತ ಕೋರಿದರು.
ಪುಣೆಯಿಂದ ರೈಲು ನಿಗದಿತ ವೇಳೆ 8 ಗಂಟೆಗೆ ಆಗಮಿಸಬೇಕಾದ ರೈಲು 10.10ಕ್ಕೆ ಬೆಳಗಾವಿ ರೈಲು ನಿಲ್ದಾಣ ತಲುಪಿತು. ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ಸಹ ಆಯೋಜನೆಗೊಂಡಿತ್ತು. ಆದರೆ, ವಿಳಂಬವಾದ ಕಾರಣ ರೈಲು ನಿಗದಿತ ಸಮಯಕ್ಕೆ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಬರಲಿಲ್ಲ. ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ನಾಗರಿಕರು ಭಾಗವಹಿಸಿ ಪುಷ್ಪವೃಷ್ಟಿಯ ಸ್ವಾಗತ ಕೋರಿದರು.
ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಗಣೇಶನನ್ನು ವೀಕ್ಷಿಸಲು ತೆರಳುತ್ತಿದ್ದು ಮಾರ್ಗ ಮಧ್ಯೆ ವಂದೇ ಭಾರತ್ ರೈಲು ಆಗಮಿಸುತ್ತಿರುವುದನ್ನು ನೋಡಿ ಪುಳಕಿತಗೊಂಡರು. ಪುಣೆಯಿಂದ ಬೆಳಗಾವಿಗೆ ಆಗಮಿಸಿರುವ ವಂದೇ ಭಾರತ್ ರೈಲು ಬೆಳಗಾವಿ ಜಿಲ್ಲೆಯ ಜನತೆಯಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಪುಣೆ ಮುಂತಾದ ಮಹಾರಾಷ್ಟ್ರದ ಪ್ರದೇಶಗಳಿಗೆ ತೆರಳುವ ಜನರಿಗೆ ವಂದೇ ಭಾರತ್ ರೈಲಿನಿಂದ ಹೆಚ್ಚಿನ ಅನುಕೂಲತೆ ಆಗಲಿದೆ.