ಬೆಳಗಾವಿ : ಶಹಾಪುರ ರಸ್ತೆಗೆ ಸಂಬಂಧಿಸಿದಂತೆ ಧಾರವಾಡ ಉಚ್ಚ ನ್ಯಾಯಾಲಯದಿಂದ 20 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶ ಪಡೆದಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ಗಾಯದ ಮೇಲೆ ಬರೆ ಎಂಬಂತೆ ಮತ್ತೊಂದು ಆರ್ಥಿಕ ಸಂಕಟ ಎದುರಾಗಿದೆ. ವಶ ಪಡಿಸಿಕೊಂಡ ಭೂಮಿಗೆ ₹ 75 ಲಕ್ಷ ಪರಿಹಾರ ನೀಡಲು ಆದೇಶಿಸಿದೆ.
ಶಹಾಪುರದ ಹುಲಬತ್ತೆ ಕಾಲೋನಿಯಲ್ಲಿ ಜಾಗೆ ಭೂಸ್ವಾಧೀನ ಪಡಿಸಿಕೊಂಡ ಪಾಲಿಕೆಯ ವಿರುದ್ಧ ನ್ಯಾಯಾಲಯದ 75 ಲಕ್ಷ ರೂ. ಪರಿಹಾರ ಕೊಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಜಪ್ತು ಮಾಡಲು ಬಂದಿದ್ದ ಸಂತ್ರಸ್ತರಿಗೆ ಇಲ್ಲಿನ ಸಿಬ್ಬಂದಿಗಳು ಅವಕಾಶ ನಿರಾಕರಿಸಿದ ಪರಿಣಾಮ ಪಾಲಿಕೆ ಉಪ ಆಯುಕ್ತರ ಕಾರ್ ಗೆ ನ್ಯಾಯಾಲಯದ ಆದೇಶ ಪ್ರತಿ ಹಚ್ಚಿರುವ ಪ್ರಕರಣ ಮಂಗಳವಾರ ನಡೆದಿದೆ.
ಪಾಲಿಕೆಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಕೀಲ ಇಂದ್ರಜಿತ್ ಬಡವನಾಚೆ, ಕಳೆದ 15 ವರ್ಷಗಳ ಹಿಂದೆ ಪಾಲಿಕೆಯವರು ಶಹಾಪುರದ ಹುಲಬತ್ತೆ ಕಾಲೋನಿಯಲ್ಲಿ ಜಾಗವನ್ನು ಭೂಸ್ವಾಧೀನ ಪಡಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿ ನಾವು ಹೈಕೋರ್ಟ್ ನಲ್ಲಿ ಹೋರಾಟ ನಡೆಸಿ ಪಾಲಿಕೆ 75 ಲಕ್ಷ ರೂ. ಪರಿಹಾರ ಕೊಡಬೇಕು. ಇಲ್ಲವೇ ಇಲ್ಲಿನ ವಸ್ತುಗಳನ್ನು ಜಪ್ತಿ ಮಾಡಲು ಅವಕಾಶ ಕೊಡಬೇಕು. ಇಲ್ಲದಿದ್ದರೆ ಇದು ನ್ಯಾಯಾಲಯದ ಉಲ್ಲಂಘನೆಯಾಗುತ್ತದೆ ಎಂದರು.