ಬೆಳಗಾವಿ: ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಇದೀಗ ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ದರ್ಶನ್ ಹಾಗೂ ಅವರ ಬೆಂಬಲಿಗರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಕರೆತರುವ ಬಗ್ಗೆ ಇದೀಗ ವದಂತಿ ಹಬ್ಬಿದೆ.
ರಾಜ್ಯದಲ್ಲೇ ಹಿಂಡಲಗಾ ಕೇಂದ್ರ ಕಾರಾಗೃಹ ಅತ್ಯಂತ ಹಳೆಯದು. ಭದ್ರತೆ ದೃಷ್ಟಿಯಿಂದಲೂ ಸುರಕ್ಷಿತ ಎನಿಸಿಕೊಂಡಿದೆ. ಹೀಗಾಗಿ ಬೆಳಗಾವಿ ಜೈಲಿಗೆ ದರ್ಶನ್ ಅವರನ್ನು ಕರೆ ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದರ್ಶನ್ ಅವರನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಸಂಬಂಧ ಬಂಧಿಸಿ ಬೆಂಗಳೂರು ಜೈಲಿನಲ್ಲಿ ಇಡಲಾಗಿದೆ.

ಶತಮಾನಗಳ ಇತಿಹಾಸ ಇರುವ ಹಿಂಡಲಗಾ ಜೈಲಿನಲ್ಲಿ 15 ಅಂಧೇರಿ ಸೆಲ್ ಗಳು (ಕತ್ತಲು ಕೋಣೆಗಳು) ಇವೆ. ಯಾವುದೇ ಕ್ಷಣದಲ್ಲಾದರೂ ಬಂಧಿಖಾನೆ ಮೇಲಧಿಕಾರಿಗಳಿಂದ ಸೆಲ್ ಗಳ ಮಾಹಿತಿ ಕೇಳುವ ಸಾಧ್ಯತೆ ಇದ್ದು, ಈ ಬಗ್ಗೆ‌ ಅಧಿಕಾರಿಗಳೂ ಮಾಹಿತಿ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.
ನಟ ದರ್ಶನ್ ಬೆಳಗಾವಿ ಜೈಲಿಗೋ ಅಥವಾ ಬಳ್ಳಾರಿ ಜೈಲಿಗೋ? ಎಂಬುದರ ಬಗ್ಗೆ ಸೋಮವಾರ ಸಂಜೆಯೊಳಗೆ ಸ್ಥಳಾಂತರ ಬಗ್ಗೆ ಪ್ರಕಟವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳು ಸಸ್ಪೆಂಡ್
ಕೊಲೆ ಆರೋಪಿ ದರ್ಶನ್‌ ಪರಪ್ಪನ ಅಗ್ರಹಾರದಲ್ಲಿ ದರ್ಬಾರ್‌ ನಡೆಸುತ್ತಿರುವ ಫೋಟೋ – ವಿಡಿಯೋಗಳು ವೈರಲ್‌ ಆದ ಬೆನ್ನಲ್ಲೇ ಏಳು ಮಂದಿ ಜೈಲು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್‌ ಅವರು, ಘಟನೆ ಹೇಗೆ ನಡೆಯಿತು ಎಂದು ವರದಿ ಕೇಳಿದ್ದೇನೆ. ಇದರಲ್ಲಿ ಏಳು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿ ಬಂದಿದೆ. ಶರಣ ಬಸವ ಅಮೀನಗಡ, ಪ್ರಭು, ತಿಪ್ಪೇಸ್ವಾಮಿ, ವೆಂಕಪ್ಪ ಕೊರ್ಟಿ, ಸಂಪತ್ ಕುಮಾರ್, ಶ್ರೀಕಾಂತ್ ತಲವಾರ್, ಬಸಪ್ಪ ತೇಲಿ ಇವರನ್ನು ಅಮಾನತು ಮಾಡಿದ್ದೇವೆ. ಜೈಲು ಸೂಪರಿಂಟೆಂಡೆಂಟ್‌ ಅವರನ್ನು ವರ್ಗಾವಣೆ ಮಾಡುತ್ತೇವೆ. ಈ ರೀತಿಯ ಘಟನೆ ನಡೆಯಬಾರದು. ಹಿರಿಯ ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.