ಬೆಂಗಳೂರು: ಕಾಂಗ್ರೆಸ್ ನವರಿಗೆ ಬಹುಮತ ಬರಲ್ಲ. ಹಾಗಾಗಿ ಬೇರೆ ಪಕ್ಷದವರ ಜತೆ ಮಾತನಾಡುವ ಪ್ರಯತ್ನ ಪಡ್ತಿದಾರೆ. ಅವರ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಬೆಂಗಳೂರಿನ ಆರ್.ಟಿ ನಗರದ ಮನೆಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಈಗ ನಮ್ಮ ಮುಂದೆ ಮೈತ್ರಿಯ ಪ್ರಶ್ನೆ ಇಲ್ಲ. ನಾವು ಬಹುಮತ ದಾಟುತ್ತೇವೆ. ಕಾಂಗ್ರೆಸ್‌ನವರು ಏನೇ ಸಭೆ ಮಾಡಲಿ. ಅವರಿಗೆ ಸಭೆ ಮಾಡುವ ಹಕ್ಕಿದೆ. ಎಲ್ಲ ಪಕ್ಷಗಳೂ ಸಭೆ ಮಾಡುತ್ತಾರೆ‌‌ ಎಂದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಔಪಚಾರಿಕವಾಗಿ ಭೇಟಿ‌ಯಾದರು.
ಈ ವೇಳೆ ಸಚಿವರಾದ ಮುರುಗೇಶ್ ನಿರಾಣಿ ಬೈರತಿ ಬಸವರಾಜ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಉಪಸ್ಥಿತರಿದ್ದರು.

ನಾನು ಮೊದಲಿಂದಲೂ ಒಂದೇ ಮಾತು ಹೇಳುತ್ತ ಬಂದಿದ್ದೇನೆ. ನಮಗೆ ಸ್ಪಷ್ಟ ಬಹುಮತ ಬರುತ್ತದೆ. ನಾವು ಗೆಲ್ಲುವ ವಿಶ್ವಾಸ ಇದ್ದು, ಬಹುಮತದ ಗಡಿ ದಾಟುತ್ತೇವೆ. ಮ್ಯಾಜಿಕ್ ನಂಬರ್ ತಲುಪುತ್ತೇವೆ. ಎಲ್ಲ ಕ್ಷೇತ್ರ, ಬೂತ್ ಗಳಿಂದ ಗ್ರೌಂಡ್ ಮಾಹಿತಿ ತರಿಸಿದ್ದೇವೆ ಎಂದರು. ನಾನೇ ವರಿಷ್ಠರಿಗೆ ಕರೆ ಮಾಡಿ ಇಲ್ಲಿನ ವಸ್ತುಸ್ಥಿತಿ ಬಗ್ಗೆ ಹೈಕಮಾಂಡ್ ನಾಯಕರಿಗೆ ತಿಳಿಸಿದ್ದೇನೆ. ಹೈಕಮಾಂಡ್ ನಾಯಕರು ಸಹ ಗೆಲ್ಲುವ ವಿಶ್ವಾಸದಲ್ಲಿದ್ದು, ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದರು.