ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) 24ನೇ ವಾರ್ಷಿಕ ಘಟಿಕೋತ್ಸವ ಜುಲೈ 18ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದ್ದು, ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು’ ಎಂದು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ತಿಳಿಸಿದರು.
‘ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಪಾಲ್ಗೊಳ್ಳುವರು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೂವರಿಗೆ ಗೌರವ ಡಾಕ್ಟರೇಟ್: ‘ಚಿಕ್ಕಬಳ್ಳಾಪುರದ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸದ್ಗುರು ಮಧುಸೂದನ್ ಸಾಯಿ, ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್.ಸೋಮನಾಥ್, ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಹರಿ ಕೆ.ಮರಾರ್ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಲಾಗುವುದು’ ಎಂದು ಅವರು ತಿಳಿಸಿದರು.
‘ಒಟ್ಟು 52,615 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಈ ಪೈಕಿ 51,084 ವಿದ್ಯಾರ್ಥಿಗಳಿಗೆ (ಸ್ವಾಯತ್ತ ಮಹಾವಿದ್ಯಾಲಯದ 15,387 ವಿದ್ಯಾರ್ಥಿಗಳು) ಬಿ.ಇ, 45 ವಿದ್ಯಾರ್ಥಿಗಳಿಗೆ ಬಿ.ಟೆಕ್, 8 ವಿದ್ಯಾರ್ಥಿಗಳಿಗೆ ಬಿ.ಪ್ಲ್ಯಾನ್, 1,138 ವಿದ್ಯಾರ್ಥಿಗಳಿಗೆ (ಸ್ವಾಯತ್ತ ಮಹಾವಿದ್ಯಾಲಯದ 169 ವಿದ್ಯಾರ್ಥಿಗಳು) ಬಿ.ಆರ್ಕ್ ಮತ್ತು 40 ವಿದ್ಯಾರ್ಥಿಗಳಿಗೆ ಸಂಶೋಧನಾ ಪದವಿ ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದರು.
‘ಬಿ.ಇ ಪರೀಕ್ಷೆ ಎದುರಿಸಿದವರಲ್ಲಿ ಶೇ 79.40 ಯುವಕರು, ಶೇ 95.62 ಯುವತಿಯರು ಪಾಸಾಗಿದ್ದಾರೆ. ಕಳೆದ ಸಲ ಉತ್ತೀರ್ಣ ಪ್ರಮಾಣ ಶೇ 82.97ರಷ್ಟಿತ್ತು. ಈ ಬಾರಿ ಶೇ 85.83ಕ್ಕೆ ಏರಿದೆ. ಕಳೆದ ಬಾರಿ ಎಸ್ಸಿ/ಎಸ್ಟಿಯ ಶೇ 53.59 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಆ ಪ್ರಮಾಣವೂ ಶೇ 74.55ಕ್ಕೆ ಏರಿದೆ’ ಎಂದರು.
ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ ಇತರರಿದ್ದರು.