ಬೆಳಗಾವಿ: ‘ಪ್ರಸಕ್ತ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 200 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಟ್ಟಡ ಮಂಜೂರಾಗಿರುವುದು ಇದೇ ಮೊದಲು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ನಗರದಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್, ಸೀರೆ, ಔಷಧ ಕಿಟ್, ತೂಕದ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
‘ಇಡೀ ದೇಶವೇ ತಿರುಗಿ ನೋಡುವಂತೆ ಅಂಗನವಾಡಿಗಳಲ್ಲಿ ಕೆಲಸ ನಡೆಯುತ್ತಿದೆ. ನೀವೆಲ್ಲ ಯಶೋದೆ ಇದ್ದಂತೆ. ದೇವಕಿ ಶ್ರೀಕೃಷ್ಣನನ್ನು ಹೆತ್ತರೂ ಯಶೋದೆ ಅತ್ಯಂತ ಮುತುವರ್ಜಿಯಿಂದ ಸಲಹಿದಳು. ಅಂತೆಯೇ ನೀವು ಮಕ್ಕಳನ್ನು ಬೆಳೆಸುತ್ತೀರಿ’ ಎಂದರು.
‘ನಿಮ್ಮಲ್ಲಿ ಇನ್ನಷ್ಟು ಉತ್ಸಾಹ ತುಂಬಲು, ಶಕ್ತಿ ತುಂಬಲು ತಲಾ ₹13 ಸಾವಿರ ಮೌಲ್ಯದ ಆಧುನಿಕ ಮೊಬೈಲ್ ಫೋನ್
ನೀಡಲಾಗುತ್ತಿದೆ. ರಾಜ್ಯದಾದ್ಯಂತ ಏಕರೂಪದ ಸಮವಸ್ತ್ರ ವಿತರಿಸಲಾಗುತ್ತಿದೆ. ಔಷಧ ಕಿಟ್, ತೂಕದ ಯಂತ್ರ ನೀಡಲಾಗುತ್ತಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಈ ಕಾರ್ಯಕ್ರಮದೊಂದಿಗೆ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಬೇಕೆನ್ನುವ ಕನಸನ್ನು ಹೊತ್ತು ನಾನು
ಇಲಾಖೆಯ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ನನಗೆ ಕೆಟ್ಟ ಹೆಸರು ಬರುತ್ತದೆ.
ನೀವೆಲ್ಲ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ನೀವೇ ನನಗೆ ಶಕ್ತಿ’ ಎಂದು ಸಚಿವೆ
ಹೇಳಿದರು.
‘ವೈರಿಗಳ ಕಡೆಯ ಅಸ್ತ್ರ ಆರೋಪ ಮಾಡುವುದು. ಅದಕ್ಕೆಲ್ಲ ಉತ್ತರ ಕೊಡುತ್ತ ಹೋದರೆ ಕೆಲಸ ಮಾಡಲು ಆಗುವುದಿಲ್ಲ. ನಾವು ಶ್ರದ್ಧೆ, ಭಕ್ತಿಯಿಂದ ಕೆಲಸ ಮಾಡೋಣ. ಇಲಾಖೆಯನ್ನು ಮಾದರಿಯನ್ನಾಗಿ ಮಾಡಲು ನಾನು ಕಂಕಣ ಬದ್ಧವಾಗಿದ್ದೇನೆ’
ಎಂದರು.
ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ದೊಡ್ಡವ್ವ ಪೂಜೇರಿ ಮಾತನಾಡಿ, ‘ಉತ್ತಮ ಮೊಬೈಲ್ ಕೊಡಿಸುವಂತೆ 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದೆವು. ಈಗ ಸಚಿವೆ ಈಡೇರಿಸಿದ್ದಾರೆ. ನಮಗೂ ಗೌರವ ಸಿಗುವಂತೆ ಮಾಡಿದ್ದಾರೆ’ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮರಡ್ಡಿ ಪಾಟೀಲ, ಸಿಡಿಪಿಒ ಸುಮಿತ್ರಾ, ಇಲಾಖೆಯ ಉಪನಿರ್ದೇಶಕ ನಾಗರಾಜ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಸವರಾಜ ಅಡವಿಮಠ ಮಾತನಾಡಿದರು.
ಬೆಳಗಾವಿ ಜಿಲ್ಲೆಗೆ 200 ಅಂಗನವಾಡಿ ಕಟ್ಟಡ ಮಂಜೂರು
