ಬೆಳಗಾವಿ: ‘ಮೆಡಿಕಲ್‌ ಸೈನ್ಸ್‌, ಅಲಾಯ್ಡ್‌ ಹೆಲ್ತ್‌ ಸೈನ್ಸ್‌ ಹಾಗೂ ವಿವಿಧ ಔಷಧಗಳು ಮತ್ತು ಆರೋಗ್ಯ ಸಮಸ್ಯೆ, ಗರ್ಭಿಣಿಯಿದ್ದಾಗ ತಾಯಂದಿರು ಪೌಷ್ಟಿಕ ಆಹಾರ ಸೇವಿಸದ್ದರಿಂದ ಅಪೌಷ್ಟಿಕ ಮಕ್ಕಳು ಜನಿಸುವ ಮಕ್ಕಳಲ್ಲಿನ ಪೌಷ್ಟಿಕಾಂಶ ಸಮಸ್ಯೆಗಳ ಕುರಿತು ಸಂಶೋಧನೆ ನಡೆಯುತ್ತಿದೆ.  ಸಂಶೋಧನೆಗಳಲ್ಲಿ ನಾವು ಹೊಸ ಕೋರ್ಸ್‌ಗಳನ್ನು ಆರಂಭಿಸಿದ್ದೇವೆ. ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಷನ್‌ ಆ್ಯಂಡ್‌ ರಿಸರ್ಚ್‌(ಕಾಹೇರ್‌) ಸ್ವಾಯತ್ತ ವಿಶ್ವವಿದ್ಯಾಲಯ ಆಗಿರುವದರಿಂದ ಇಂಥ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಕುಲಪತಿ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು.

ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾನ್ಪುರದ ಐಐಟಿ ಸಹಯೋಗದೊಂದಿಗೆ ವೈದ್ಯಕೀಯ ಉಪಕರಣಗಳ ಕುರಿತು ಸಂಶೋಧನೆ ಕೈಗೊಂಡಿದ್ದೇವೆ. ಆರೋಗ್ಯದ ಮೇಲೆ ವಿವಿಧ ಆಹಾರಗಳು ಬೀರುವ ಪರಿಣಾಮಗಳ ಕುರಿತ ಸಂಶೋಧನೆಯಲ್ಲಿ ಮೂವರು ಖ್ಯಾತ ವಿಜ್ಞಾನಿಗಳು ಪಾಲ್ಗೊಂಡಿದ್ದಾರೆ. ವಿವಿಧ ಔಷಧಗಳು ಮತ್ತು ಇತರೆ ವೈದ್ಯಕೀಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಭಾಕರ ಕೋರೆ ಬೇಸಿಕ್‌ ಸೈನ್ಸಸ್‌ ರಿಸರ್ಚ್‌ ಸೆಂಟರ್‌ನಿಂದ ಸಂಶೋಧನೆ ಕೈಗೊಳ್ಳುತ್ತಿದ್ದೇವೆ. ಮೆಡ್‌ಟೆಕ್‌ ಉತ್ಪನ್ನಗಳ ಸಂಶೋಧನೆಗೆ ಕೆಎಲ್‌ಇ ಇನ್‌ಕ್ಯುಬೇಷನ್‌ ಆ್ಯಂಡ್‌ ಇನ್ನೋವೇಷನ್ ಸೆಂಟರ್ ನೆರವಾಗುತ್ತಿದೆ’ ಎಂದು ವಿವರಿಸಿದರು.

‘ಭಾರತೀಯ ಔಷಧಗಳ ಕುರಿತಾಗಿ ಎನ್‌ಐಟಿಎಂ–ಐಸಿಎಂಆರ್‌ ಸಹಯೋಗದಲ್ಲಿ ಸಂಶೋಧನೆ ಮಾಡುತ್ತಿದ್ದೇವೆ. ಪಶ್ಚಿಮಘಟ್ಟ ವಲಯ ಔಷಧೀಯ ಸಸ್ಯಗಳನ್ನು ಹೊಂದಿದೆ. ತಾಲ್ಲೂಕಿನ ಬಂಬರಗಾದ 20 ಎಕರೆ ಜಾಗದಲ್ಲಿ ಔಷಧೀಯ ಸಸಿಗಳನ್ನು ನೆಡಲಾಗಿದೆ. ಆಯುರ್ವೇದ ಔಷಧ ತಯಾರಿಕೆ ಘಟಕ ಶೀಘ್ರವೇ ತಲೆ ಎತ್ತಲಿದೆ. ಪ್ರಸ್ತುತ ನಾವು ಆಯುರ್ವೇದ ಔಷಧ ತಯಾರಿಸುತ್ತಿದ್ದೇವೆ. ಆದರೆ, ಅವು ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಗೆ ರೋಗಿಗಳ ಅಗತ್ಯಗಳನ್ನಷ್ಟೇ ಪೂರೈಸುತ್ತಿವೆ’ ಎಂದು ವಿವರಿಸಿದರು.

‘ಹೆಲ್ತ್‌ ಅಲಾಯ್ಡ್‌ ಸೈನ್ಸ್‌ ಕೋರ್ಸ್‌ ಓದಿದವರಿಗೆ ವಿಪುಲವಾದ ಉದ್ಯೋಗವಕಾಶಗಳಿವೆ. ಪಬ್ಲಿಕ್‌ ಹೆಲ್ತ್‌ ವಿಭಾಗದ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದ ಅವರು,  ಮುಂದಿನ ಶೈಕ್ಷಣಿಕ ವರ್ಷದಿಂದ ಕಾಹೇರ್‌ ಅಡಿ ಬಿ.ಎಸ್ಸಿ ಕೃಷಿ ಕೋರ್ಸ್ ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ. ಹುಬ್ಬಳ್ಳಿಯಲ್ಲಿ ಹೊಸ ಆಯುರ್ವೇದ ವೈದ್ಯಕೀಯ ಕಾಲೇಜು ಆರಂಭವಾಗಲಿದೆ. ಹೆಲ್ತ್‌ ಇನ್‌ಫಾರ್ಮೇಷನ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಇದೇ ಶೈಕ್ಷಣಿಕ ವರ್ಷ ಆರಂಭವಾಗಲಿದೆ’ ಎಂದರು.