ಬೆಳಗಾವಿ: ಸಾಲ ಮರಳಿಸಲು ವಿಳಂಬ ಆಗಿದ್ದಕ್ಕೆ ಪತ್ನಿ-
ಪುತ್ರನನ್ನು ಗೃಹಬಂಧನದಲ್ಲಿ ಇರಿಸಿದ್ದಕ್ಕೆ ಮನನೊಂದು ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ.
ರಾಜು ಖೋತಗಿ ಆತ್ಮಹತ್ಯೆ ಮಾಡಿಕೊಂಡ ರೈತ.

ಇಸ್ಲಾಂಪುರ ಗ್ರಾಮದ ಸಿದ್ದವ್ವ ಬಯ್ಯನವರ ಎಂಬ ಮಹಿಳೆಯು ರಾಜುನ ಪತ್ನಿ ದುರ್ಗವ್ವ, ಪುತ್ರ ಬಸವರಾಜ ಅವರನ್ನು ಗೃಹಬಂಧನದಲ್ಲಿರಿಸಿ ದಬ್ಬಾಳಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
2 ದಿನ ಪತ್ನಿ- ಪುತ್ರನಿಗೆ ಗೃಹಬಂಧನದಲ್ಲಿಟ್ಟು ಶಿಕ್ಷೆ ನೀಡಲಾಗಿದೆ
ಜೀವನ ನಿರ್ವಹಣೆಗೆ ಸಿದ್ದವ್ವ ಬಳಿ ಐದು ತಿಂಗಳ ಹಿಂದೆ ರಾಜು ಖೋತಗಿ ಅವರು ಒಂದೂವರೆ ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಸಾಲಕ್ಕೆ ಪ್ರತಿಯಾಗಿ ಶೇ. 10ರಷ್ಟು ಬಡ್ಡಿಯನ್ನು ಪ್ರತಿತಿಂಗಳು ತುಂಬುತ್ತಿದ್ದರು. ಎರಡು ದಿನ ಹಿಂದೆ ಏಕಾಏಕಿ ಮನೆಗೆ ಕರೆದು ಕೊಟ್ಟ ಸಾಲ ಮರಳಿಸುವಂತೆ ಸಿದ್ದವ್ವ ತಾಕೀತು ಮಾಡಿದ್ದಾಳೆ. ಈ ವೇಳೆ ಸಾಲ ಮರಳಿಸಲು ಒಂದೆರಡು ದಿನ ಕಾಲಾವಕಾಶವನ್ನು ಕೇಳಿದ್ದರು. ಇದಕ್ಕೆ ಒಪ್ಪದೇ ಸಾಲ ಮರಳಿಸುವವರೆಗೂ ಪುತ್ರನನ್ನು ಮನೆಯಲ್ಲಿ ಬಿಟ್ಟು ಹೋಗುವಂತೆ ಸಿದ್ದವ್ವ ಆವಾಜ್ ಹಾಕಿದ್ದಾಳೆ.
ಸಂಜೆಯಾದರೂ ಪುತ್ರನನ್ನು ಬಿಡದೇ ಇದ್ದಾಗ, ಸಿದ್ದವ್ವಳ ಮನೆಗೆ ರಾಜು ಮತ್ತು ಆತನ ಪತ್ನಿ ದುರ್ಗವ್ವ ಹೋಗಿದ್ದಾರೆ. ಈ ವೇಳೆ ಬಸವರಾಜ್‌ನನ್ನು ಬಿಟ್ಟು ರಾಜು ಖೋತಗಿ, ದುರ್ಗವ್ವರನ್ನು ಮನೆಯಲ್ಲಿ ಕೂರಿಸಿಕೊಳ್ಳಲಾಗಿದೆ. ಮರುದಿನ ರಾಜುನನ್ನು ಬಿಟ್ಟು ಬಸವರಾಜ್‌, ದುರ್ಗವ್ವರನ್ನು ಗೃಹಬಂಧನದಲ್ಲಿ ಇರಿಸಿಕೊಂಡಿದ್ದಾಳೆ. ಇದರಿಂದ ಮನನೊಂದು ಮನೆಗೆ ಬಂದ ರಾಜು ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಬರಗಾಲದಿಂದ ಬೆಳೆ ನಾಶವಾದ ಪರಿಣಾಮ ಉಪಜೀವನಕ್ಕೆ ಸಿದ್ದವ್ವನ ಬಳಿ ಸಾಲ ಪಡೆದಿದ್ದ. ಸಾಲ ಮರುಪಾವತಿ ವಿಳಂಬವಾಗಿದ್ದಕ್ಕೆ, ಬಡ್ಡಿ ಮೇಲೆ ಸಾಲ ನೀಡಿದ್ದ ಸಿದ್ದವ್ವ ಅಮಾನವೀಯವಾಗಿ
ನಡೆಸಿಕೊಂಡಿದ್ದಾಳೆ. ಸಿದ್ದವ್ವಳ ವಿರುದ್ಧ ದೂರು ದಾಖಲಿಸಿಕೊಳ್ಳದೇ ಪೊಲೀಸರು ಸತಾಯಿಸಿರುವ ಆರೋಪ ಕೇಳಿ ಬಂದಿದೆ.
ಬೆಳಗ್ಗೆಯಿಂದ ಠಾಣೆಯಲ್ಲಿ ಕೂರಿಸಿಕೊಂಡು ರಾತ್ರಿ ವೇಳೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ಯಮಕನಮರಡಿ ಠಾಣೆ ಪೊಲೀಸರ ವಿರುದ್ಧ ದುರ್ಗವ್ವ ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ.